ಮೂಡಬಿದ್ರಿ : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಪೈಕಿ ಮೂಡಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ದಿಶಾ ಅವರ ಸಾಧನೆ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿದೆ. ಪರೀಕ್ಷೆಯ ಅರ್ಧದಲ್ಲಿಯೇ ಅಮ್ಮನನ್ನು ಕಳೆದುಕೊಂಡ ದಿಶಾ, ಬೆಟ್ಟದಷ್ಟು ದುಃಖದ ನಡುವೆಯೂ ಎದೆಗುಂದದೆ ಪರೀಕ್ಷೆ ಎದುರಿಸಿ ಆರು ವಿಷಯಗಳಲ್ಲೂ ನೂರಕ್ಕೆ ನೂರು ಅಂಕ (600/600) ಪಡೆಯುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಪರೀಕ್ಷಾ ಸರಣಿ ನಡೆಯುತ್ತಿದ್ದಾಗಲೇ ದಿಶಾ ಅವರ ತಾಯಿ ನಿಧನರಾಗಿದ್ದರು. ಮನೆಯಲ್ಲಿ ಸೂತಕದ ಛಾಯೆ, ಮನಸ್ಸಿನಲ್ಲಿ ಅಮ್ಮನನ್ನು ಕಳೆದುಕೊಂಡ ಅತೀವ ನೋವಿದ್ದರೂ, ಅಮ್ಮನ ಕನಸನ್ನು ನನಸು ಮಾಡಲೇಬೇಕೆಂಬ ಹಠದೊಂದಿಗೆ ದಿಶಾ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದರು. ಅವರ ಈ ಅಪಾರ ಶ್ರಮ ಮತ್ತು ಏಕಾಗ್ರತೆಗೆ ಇಂದು ಅಭೂತಪೂರ್ವ ಯಶಸ್ಸು ಸಿಕ್ಕಿದ್ದು, ಇಡೀ ರಾಜ್ಯವೇ ಈ ವಿದ್ಯಾರ್ಥಿನಿಯ ಧೈರ್ಯಕ್ಕೆ ಸಲಾಂ ಎನ್ನುತ್ತಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯು ದಿಶಾ ಅವರ ಈ ಸಾಧನೆಯನ್ನು ಸಂಭ್ರಮಿಸಿದ್ದು, ಕಷ್ಟಕಾಲದಲ್ಲೂ ದೃತಿಗೆಡದ ಅವರ ವ್ಯಕ್ತಿತ್ವ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.

