ವಾಷಿಂಗ್ಟನ್ : ಅಮೆರಿಕದ ನೆಲದಲ್ಲಿ ಇರಾನ್ ಸರ್ಕಾರದಿಂದ ಬೆದರಿಕೆಗಳು ಹೆಚ್ಚಾಗುತ್ತಿವೆ ಎಂದು ಎಫ್ಬಿಐ ಕಳೆದ ಮಾರ್ಚ್ 20 ರಂದೇ ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿತ್ತು. ಇರಾನ್ ಸರ್ಕಾರವು ಅಮೆರಿಕದ ಮಿಲಿಟರಿ ನೆಲೆಗಳು, ಸರ್ಕಾರಿ ಕಟ್ಟಡಗಳು, ಯಹೂದಿ ಮತ್ತು ಇಸ್ರೇಲಿ ಸಂಸ್ಥೆಗಳು ಹಾಗೂ ಅಮೆರಿಕದಲ್ಲಿರುವ ಇರಾನ್ ವಿರೋಧಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಎಫ್ಬಿಐ ವರದಿಯಲ್ಲಿ ತಿಳಿಸಿತ್ತು. ಆದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಶ್ವೇತಭವನವು ಈ ದಾಳಿಯ ಸಾಧ್ಯತೆಗಳನ್ನು ತಳ್ಳಿಹಾಕಿತ್ತು ಮತ್ತು ಈ ಮಾಹಿತಿಯನ್ನು ಸಾರ್ವಜನಿಕಗೊಳಿಸದಂತೆ ತಡೆ ಹಿಡಿದಿತ್ತು ಎಂದು ವರದಿಯಾಗಿದೆ.
ಈ ಗುಪ್ತಚರ ವರದಿಯ ಪ್ರಕಾರ, ಇರಾನ್ ತನ್ನ ಗುರಿಗಳನ್ನು ಹತ್ಯೆ ಮಾಡಲು ಅಥವಾ ಅಪಹರಣ ಮಾಡಲು ಕೇವಲ ಬಂದೂಕುಗಳಲ್ಲದೆ, ಚಾಕು ಇರಿತ, ವಾಹನಗಳಿಂದ ಡಿಕ್ಕಿ ಹೊಡೆಯುವುದು, ವಿಷಪೂರಿತ ಆಹಾರ ನೀಡುವುದು, ಉಸಿರುಗಟ್ಟಿಸುವುದು ಮತ್ತು ಸ್ಫೋಟಕಗಳನ್ನು ಬಳಸುವ ವಿಭಿನ್ನ ಹಾಗೂ ಕಿರಾತಕ ವಿಧಾನಗಳನ್ನು ರೂಪಿಸಿತ್ತು. ಅಲ್ಲದೆ, ಇರಾನ್ನ ಗುಪ್ತಚರ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳು, ಲೈವ್ಸ್ಟ್ರೀಮ್ ಮತ್ತು ಮ್ಯಾಪ್ ಅಪ್ಲಿಕೇಶನ್ಗಳನ್ನು ಹ್ಯಾಕ್ ಮಾಡುವ ಮೂಲಕ ಅಮೆರಿಕದ ಪ್ರಮುಖ ತಾಣಗಳ ಭದ್ರತಾ ವ್ಯವಸ್ಥೆಯನ್ನು ರಹಸ್ಯವಾಗಿ ಗಮನಿಸುತ್ತಿವೆ ಎಂದು ಎಫ್ಬಿಐ ಸ್ಪಷ್ಟವಾಗಿ ಉಲ್ಲೇಖಿಸಿತ್ತು.
ಆದರೆ, ಈ ಗಂಭೀರ ಎಚ್ಚರಿಕೆಗಳ ಹೊರತಾಗಿಯೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ನಿಂದ ಇಂತಹ ಯಾವುದೇ ದಾಳಿ ನಡೆಯುವ ಸಾಧ್ಯತೆಗಳಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಾ ಬಂದಿದ್ದರು. ಕಳೆದ ಮಾರ್ಚ್ 11 ರಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದ ಟ್ರಂಪ್, ಅಮೆರಿಕದ ಮೇಲೆ ಇರಾನ್ ದಾಳಿ ಮಾಡಬಹುದು ಎಂಬ ಭಯ ನನಗಿಲ್ಲ ಎಂದು ಮಾಹಿತಿ ನೀಡಿದ್ದರು. ಶ್ವೇತಭವನವು ಈ ಎಫ್ಬಿಐ ವರದಿಯ ಬಿಡುಗಡೆಯನ್ನು ತಡೆಹಿಡಿದಿತ್ತು ಮತ್ತು ಮಾಹಿತಿಯನ್ನು ಸಾರ್ವಜನಿಕಗೊಳಿಸುವುದರಿಂದ ಜನರ ಮನಸ್ಸಿನಲ್ಲಿ ಅನಗತ್ಯ ಭಯ ಸೃಷ್ಟಿಯಾಗುತ್ತದೆ ಎಂದು ಸಮರ್ಥಿಸಿಕೊಂಡಿತ್ತು.
ಪ್ರಸ್ತುತ ಅಮೆರಿಕದ ಬಹುಪಾಲು ಜನರು ಇರಾನ್ ವಿರುದ್ಧದ ಯುದ್ಧವನ್ನು ವಿರೋಧಿಸುತ್ತಿದ್ದು, ಕೂಡಲೇ ಸಂಘರ್ಷವನ್ನು ಅಂತ್ಯಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಶ್ವೇತಭವನದ ವಕ್ತಾರೆ ಅಬಿಗೈಲ್ ಜಾಕ್ಸನ್ ಈ ಬಗ್ಗೆ ಪ್ರತಿಕ್ರಿಯಿಸಿ, “ಟ್ರಂಪ್ ಆಡಳಿತವು ದೇಶವನ್ನು ರಕ್ಷಿಸಲು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ, ವರದಿಯ ಮೂಲ ಸಂದರ್ಭವನ್ನು ತಿಳಿಯದೆ ಮಾಧ್ಯಮಗಳು ಭಯ ಬಿತ್ತಬಾರದು” ಎಂದು ಹೇಳಿದ್ದಾರೆ. ಈ ಬೆಳವಣಿಗೆಯು ಟ್ರಂಪ್ ಸರ್ಕಾರ ಮತ್ತು ಗುಪ್ತಚರ ಸಂಸ್ಥೆಗಳ ನಡುವಿನ ಭಿನ್ನಾಭಿಪ್ರಾಯವನ್ನು ಎತ್ತಿ ತೋರಿಸಿದ್ದು, ಈಗ ಜಾರಿಯಲ್ಲಿರುವ ಕದನ ವಿರಾಮವು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನು ಮೂಡಿಸಿದೆ.

