ಹುಮ್ನಾಬಾದ್ : ಗುರುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 50 ರ ದುಬಲಗುಂಡಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಹಳ್ಳಿಖೇಡ (ಬಿ) ಪಟ್ಟಣದ ನಿವಾಸಿಯಾದ ರಫೀಕ್ ತಾಂಬೋಳೆ ಎಂಬುವವರು ಬೈಕ್ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರಫೀಕ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಕೆಲವರಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ.
ಗಾಯಾಳುಗಳ ರಕ್ಷಣೆಗೆ ಧಾವಿಸಿದ ಶಾಸಕರು: ಅದೇ ಸಮಯದಲ್ಲಿ ಆ ರಸ್ತೆಯಲ್ಲಿ ಸಾಗುತ್ತಿದ್ದ ಹುಮ್ನಾಬಾದ್ ಶಾಸಕ ಡಾ. ಸಿದ್ದು ಪಾಟೀಲ್ ಅವರು ಅಪಘಾತದ ದೃಶ್ಯ ಕಂಡು ತಕ್ಷಣ ಕಾರು ನಿಲ್ಲಿಸಿದ್ದಾರೆ. ಮಾನವೀಯತೆ ಮೆರೆದ ಶಾಸಕರು, ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದರು. ಘಟನೆಗೆ ಸಂಬಂಧಿಸಿದಂತೆ ಹುಮ್ನಾಬಾದ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

