ವಾಷಿಂಗ್ಟನ್ : “ಇಂದು ರಾತ್ರಿ ಇಡೀ ನಾಗರಿಕತೆಯೇ ನಾಶವಾಗಲಿದೆ” ಎಂದು ಇರಾನ್ಗೆ ಭೀಕರ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಅನಿರೀಕ್ಷಿತ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಇರಾನ್ನ ವಿದ್ಯುತ್ ಸ್ಥಾವರಗಳು ಮತ್ತು ಪ್ರಮುಖ ಸೇತುವೆಗಳ ಮೇಲೆ ನಡೆಸಲು ಉದ್ದೇಶಿಸಿದ್ದ ವಿನಾಶಕಾರಿ ದಾಳಿಗಳಿಂದ ಅವರು ತಾತ್ಕಾಲಿಕವಾಗಿ ಹಿಂದೆ ಸರಿದಿದ್ದು, ಎರಡು ವಾರಗಳ ಕಾಲ ಕದನ ವಿರಾಮ (Ceasefire) ಘೋಷಿಸಿದ್ದಾರೆ.
ತಮ್ಮ ‘ಟ್ರುತ್ ಸೋಶಿಯಲ್’ ಪ್ಲಾಟ್ಫಾರ್ಮ್ನಲ್ಲಿ ಈ ಘೋಷಣೆ ಮಾಡಿರುವ ಟ್ರಂಪ್, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ನೀಡಿದ ಶಾಂತಿ ಪ್ರಸ್ತಾವನೆಯನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಈ ಪ್ರಸ್ತಾವನೆಯ ಪ್ರಮುಖ ಅಂಶವೆಂದರೆ ಮುಂದಿನ ಎರಡು ವಾರಗಳ ಕಾಲ ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಮತ್ತು ಜಾಗತಿಕ ತೈಲ ಪೂರೈಕೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯನ್ನು (Strait of Hormuz) ತಕ್ಷಣವೇ ಮುಕ್ತಗೊಳಿಸುವುದು. ಅಮೆರಿಕ ತನ್ನ ಎಲ್ಲಾ ಮಿಲಿಟರಿ ಗುರಿಗಳನ್ನು ಈಗಾಗಲೇ ಸಾಧಿಸಿದೆ ಮತ್ತು ಇರಾನ್ ನೀಡಿದ 10 ಅಂಶಗಳ ಶಾಂತಿ ಪ್ರಸ್ತಾವನೆಯು ದೀರ್ಘಕಾಲದ ಶಾಂತಿ ಒಪ್ಪಂದಕ್ಕೆ ಉತ್ತಮ ಆಧಾರವಾಗಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
ಈ ಬೆಳವಣಿಗೆಗೆ ಇರಾನ್ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಮಾಹಿತಿ ನೀಡಿ, ಪಾಕಿಸ್ತಾನದ ಮನವಿಗೆ ಸ್ಪಂದಿಸಿ ಕದನ ವಿರಾಮಕ್ಕೆ ಸಮ್ಮತಿ ಸೂಚಿಸಿದ್ದಾರೆ. “ಅಮೆರಿಕ ತನ್ನ ದಾಳಿಗಳನ್ನು ಸ್ಥಗಿತಗೊಳಿಸಿದರೆ, ಇರಾನ್ನ ಶಕ್ತಿಶಾಲಿ ಸಶಸ್ತ್ರ ಪಡೆಗಳು ತಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ನಿಲ್ಲಿಸಲಿವೆ. ಮುಂದಿನ 15 ದಿನಗಳ ಕಾಲ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಸಶಸ್ತ್ರ ಪಡೆಗಳ ಸಮನ್ವಯದೊಂದಿಗೆ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಅವಕಾಶ ನೀಡಲಾಗುವುದು” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇರಾನ್ನ ನೂತನ ಸುಪ್ರೀಂ ಲೀಡರ್ ಆಯತೊಲ್ಲಾ ಮೊಜ್ತಾಬಾ ಖಮೇನಿ ಅವರು ಚೀನಾದ ಮಧ್ಯಸ್ಥಿಕೆಯ ನಂತರ ಈ ನಿರ್ಧಾರಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ವರದಿಯಾಗಿದೆ.
ಫೆಬ್ರವರಿ 28 ರಿಂದ ಆರಂಭವಾದ ಈ ಭೀಕರ ಯುದ್ಧದಲ್ಲಿ ಇರಾನ್ನಲ್ಲಿ 1,900 ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಲೆಬನಾನ್ನಲ್ಲಿ 1,500 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ ಟ್ರಂಪ್ ಅವರು ‘ನಾಗರಿಕತೆ ಅಂತ್ಯ’ವಾಗಲಿದೆ ಎಂದು ನೀಡಿದ್ದ ಎಚ್ಚರಿಕೆಯು ಅಣ್ವಸ್ತ್ರ ದಾಳಿಯ ಭೀತಿಯನ್ನು ಸೃಷ್ಟಿಸಿತ್ತು. ಆದರೆ, ಇರಾನ್ನಲ್ಲಿ ಹೊಸ ಮತ್ತು ಸ್ಮಾರ್ಟ್ ನಾಯಕರು ಬಂದಿದ್ದಾರೆ ಎಂದು ಟ್ರಂಪ್ ಹೇಳಿರುವುದು ಮತ್ತು ಮಾತುಕತೆಗೆ ಮುಂದಾಗಿರುವುದು ವಿಶ್ವದಾದ್ಯಂತ ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ಕದನ ವಿರಾಮದಿಂದಾಗಿ ತೈಲ ಮಾರುಕಟ್ಟೆಯಲ್ಲಿ ಉಂಟಾಗಿದ್ದ ಬಿಕ್ಕಟ್ಟು ತಾತ್ಕಾಲಿಕವಾಗಿ ಶಮನವಾಗುವ ನಿರೀಕ್ಷೆಯಿದೆ.

