ನವದೆಹಲಿ : ಆಮ್ ಆದ್ಮಿ ಪಕ್ಷ (AAP) ಮತ್ತು ಸಂಸದ ರಾಘವ್ ಚಡ್ಡಾ ನಡುವಿನ ರಾಜಕೀಯ ಸಂಘರ್ಷ ಈಗ ಬೀದಿಗೆ ಬಂದಿದೆ. ಪಕ್ಷದ ನಾಯಕತ್ವದಿಂದ ಮೂಲೆಗುಂಪಾಗಿರುವ ಬೆನ್ನಲ್ಲೇ ಆಕ್ರೋಶಗೊಂಡಿರುವ ಚಡ್ಡಾ, ಶುಕ್ರವಾರ ಇನ್‌ಸ್ಟಾಗ್ರಾಮ್‌ನಲ್ಲಿ “Voice Raised Price Paid” (ಧ್ವನಿ ಎತ್ತಿದ್ದಕ್ಕೆ ಬೆಲೆ ತೆತ್ತಿದ್ದೇನೆ) ಎಂಬ ಶೀರ್ಷಿಕೆಯಡಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಾವು ಸಂಸತ್ತಿನಲ್ಲಿ ವಿವಿಧ ಜನಪರ ವಿಷಯಗಳ ಬಗ್ಗೆ ಧ್ವನಿ ಎತ್ತಿದ ಕ್ಷಣಗಳನ್ನು ಸಂಕಲಿಸಿ ತಮ್ಮ ಕೆಲಸದ ಬದ್ಧತೆಯನ್ನು ತೋರಿಸಿದ್ದಾರೆ.
ಏಪ್ರಿಲ್ 2 ರಂದು ಎಎಪಿ ಪಕ್ಷವು ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ಪದಚ್ಯುತಗೊಳಿಸಿತ್ತು. “ಚಡ್ಡಾ ಅವರು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತದೆ, ಕೇವಲ ತನ್ನ ಮೃದು ಪ್ರಚಾರ (Soft PR) ದಲ್ಲಿ ತೊಡಗಿದ್ದಾರೆ” ಎಂದು ಪಕ್ಷವು ಗಂಭೀರವಾಗಿ ಆರೋಪಿಸಿತ್ತು. ಪಕ್ಷದ ಈ ನಿರ್ಧಾರದಿಂದ ಚಡ್ಡಾ ಸದ್ಯ ಪಕ್ಷದಲ್ಲಿ ಹಂತಹಂತವಾಗಿ ದೂರವಾಗುತ್ತಿದ್ದಾರೆ.
ಈ ಆರೋಪಗಳನ್ನು “ಸುಳ್ಳು” ಎಂದು ತಳ್ಳಿಹಾಕಿರುವ ಚಡ್ಡಾ, ಪಕ್ಷದ ವಿರುದ್ಧ ಸಂಘರ್ಷಕ್ಕೆ ಇಳಿದಿದ್ದಾರೆ. “ನನ್ನ ಸಂಸದೀಯ ಸಾಧನೆಯನ್ನು ಪ್ರಶ್ನಿಸುತ್ತಿರುವವರಿಗೆ ನನ್ನ ಕೆಲಸವೇ ಉತ್ತರ ನೀಡಲಿದೆ” ಎಂದು ಪೋಸ್ಟ್ ಮಾಡಿರುವ ಅವರು, ತಾವು ಸಂಸತ್ತಿಗೆ ಹೋಗುವುದು ಜನರ ಸಮಸ್ಯೆಗಳನ್ನು ಎತ್ತಲು ಹೊರತು ಗದ್ದಲ ಸೃಷ್ಟಿಸುವುದಕ್ಕಲ್ಲ ಎಂದು ತಿರುಗೇಟು ನೀಡಿದ್ದಾರೆ. ಸ್ಥಾನ ಕಳೆದುಕೊಂಡ ನಂತರ ಚಡ್ಡಾ ಸರಣಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವುದು, ಅವರು ಪಕ್ಷದ ನಿರ್ಧಾರವನ್ನು ಸುಲಭವಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

