ಬೆಂಗಳೂರು, ಅನಿಲ್ ಕುಂಬ್ಳೆ ಸರ್ಕಲ್ : ಬೆಂಗಳೂರಿನ ಎಂ.ಜಿ. ರಸ್ತೆ ಮತ್ತು ಅನಿಲ್ ಕುಂಬ್ಳೆ ಸರ್ಕಲ್ ಬಳಿ ಸಾರ್ವಜನಿಕರ ಜೀವಕ್ಕೆ ಅಪಾಯವಾಗುವಂತೆ ರಿಕ್ಕಿ ರೈ ಅವರು ತಮ್ಮ ಬಿಳಿ ಬಣ್ಣದ ಲ್ಯಾಂಬೋರ್ಗಿನಿ ಕಾರಿನಲ್ಲಿ ಅಪಾಯಕಾರಿ ‘ಡ್ರಿಫ್ಟಿಂಗ್’ (Drifting) ಸ್ಟಂಟ್‌ಗಳನ್ನು ಮಾಡಿದ್ದರು. ಮಾರ್ಚ್ 21ರಂದು ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಸುಮಾರು 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಕಾರನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ನಕಲಿ ನಂಬರ್ ಪ್ಲೇಟ್ ಮತ್ತು ದಂಡ: ತನಿಖೆಯ ವೇಳೆ ಪೊಲೀಸರಿಗೆ ಮತ್ತೊಂದು ಆಘಾತಕಾರಿ ವಿಷಯ ಬಯಲಾಗಿದೆ. ಈ ಐಷಾರಾಮಿ ಕಾರಿಗೆ ನಕಲಿ ನಂಬರ್ ಪ್ಲೇಟ್ (Fake Number Plate) ಅಳವಡಿಸಲಾಗಿತ್ತು. ಕಾರಿನ ಅಸಲಿ ನೋಂದಣಿ ದೆಹಲಿಯದ್ದಾಗಿದ್ದು (DL), ಕರ್ನಾಟಕದ ಫ್ಯಾನ್ಸಿ ನಂಬರ್ ಪ್ಲೇಟ್ (KA-05 NR 0009) ಬಳಸಿ ವಂಚನೆ ಎಸಗಲಾಗಿತ್ತು. ನಿಯಮ ಉಲ್ಲಂಘನೆ ಮತ್ತು ವಂಚನೆಯ ಆರೋಪದ ಮೇಲೆ ಆರ್‌ಟಿಒ (RTO) ಅಧಿಕಾರಿಗಳು ರಿಕ್ಕಿ ರೈ ಅವರಿಗೆ ಬರೋಬ್ಬರಿ 35 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಕಾನೂನು ಕ್ರಮ: ಈಗಾಗಲೇ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ರಿಕ್ಕಿ ರೈ ಅವರಿಗೆ ನೋಟಿಸ್ ನೀಡಲಾಗಿದೆ. ಅಪಾಯಕಾರಿ ಚಾಲನೆ ಮತ್ತು ನಕಲಿ ನಂಬರ್ ಪ್ಲೇಟ್ ಬಳಸಿದ ಸಂಬಂಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. “ಯಾರೇ ಆಗಲಿ ಕಾನೂನಿಗಿಂತ ದೊಡ್ಡವರಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದು, ತನಿಖೆ ಮುಂದುವರಿದಿದೆ.

