ಮುಂಬೈ :ಸಂಗೀತ ಲೋಕದ ಸುವರ್ಣ ಯುಗ ಅಂತ್ಯ: 92ನೇ ವಯಸ್ಸಿನಲ್ಲಿ ಗಾನಕೋಗಿಲೆ ಆಶಾ ಭೋಸ್ಲೆ ನಿಧನ; ಕಂಬನಿ ಮಿಡಿದ ಭಾರತ!
ಭಾರತೀಯ ಚಿತ್ರರಂಗದ ಅದ್ವಿತೀಯ ಗಾಯಕಿ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಆಶಾ ಭೋಸ್ಲೆ (92) ಇಂದು (ಏಪ್ರಿಲ್ 12, ಭಾನುವಾರ) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತೀವ್ರ ಹೃದಯಾಘಾತ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಕೊನೆಯ ಕ್ಷಣಗಳು: ಶನಿವಾರ ಸಂಜೆ ತೀವ್ರ ಆಯಾಸ ಮತ್ತು ಎದೆನೋವಿನ ಕಾರಣ ಆಶಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದ ಬಗ್ಗೆ ಮೊಮ್ಮಗಳು ಜನೈ ಭೋಸ್ಲೆ ಅವರು ಇನ್ಸ್ಟಾಗ್ರಾಮ್ ಮೂಲಕ ಮಾಹಿತಿ ನೀಡಿ ಪ್ರಾರ್ಥಿಸುವಂತೆ ವಿನಂತಿಸಿದ್ದರು. ಆದರೆ, ಮಧ್ಯಾಹ್ನದ ವೇಳೆಗೆ ಬಹುಅಂಗಾಂಗ ವೈಫಲ್ಯದಿಂದ (Multi-organ failure) ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಅಧಿಕೃತವಾಗಿ ಘೋಷಿಸಿದ್ದಾರೆ.
ಅದ್ವಿತೀಯ ಸಂಗೀತ ಪಯಣ: ಗಾನಕೋಕಿಲೆ ಲತಾ ಮಂಗೇಶ್ಕರ್ ಅವರ ಕಿರಿಯ ಸಹೋದರಿಯಾದ ಆಶಾ ಭೋಸ್ಲೆ ಅವರು ಎಂಟು ದಶಕಗಳ ಕಾಲ ಭಾರತೀಯ ಸಂಗೀತ ಕ್ಷೇತ್ರವನ್ನು ಆಳಿದ್ದಾರೆ. 12,500 ಕ್ಕೂ ಹೆಚ್ಚು ಹಾಡುಗಳನ್ನು ವಿವಿಧ ಭಾಷೆಗಳಲ್ಲಿ ಹಾಡಿರುವ ಇವರು, ‘ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ನಲ್ಲೂ ಸ್ಥಾನ ಪಡೆದಿದ್ದರು. ಮೆಲೋಡಿ ಹಾಡುಗಳಿಂದ ಹಿಡಿದು ಕವ್ವಾಲಿ, ಪಾಪ್ ಮತ್ತು ಶಾಸ್ತ್ರೀಯ ಸಂಗೀತದವರೆಗೆ ಇವರ ಧ್ವನಿ ಅಜರಾಮರ.
ಗಣ್ಯರ ಸಂತಾಪ: ಆಶಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಚಿತ್ರರಂಗದ ಸಾವಿರಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. “ಭಾರತೀಯ ಸಂಗೀತದ ಅತಿದೊಡ್ಡ ಸ್ಫೂರ್ತಿಯನ್ನು ನಾವು ಕಳೆದುಕೊಂಡಿದ್ದೇವೆ” ಎಂದು ಗಣ್ಯರು ಕಂಬನಿ ಮಿಡಿದಿದ್ದಾರೆ. ಅವರ ಪುತ್ರ ಆನಂದ್ ಭೋಸ್ಲೆ ಅವರು ನೀಡಿರುವ ಮಾಹಿತಿಯಂತೆ, ನಾಳೆ (ಸೋಮವಾರ) ಮಧ್ಯಾಹ್ನ 4 ಗಂಟೆಗೆ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನು ಓದಿ : KODAGU :ಭೀಕರ ರಸ್ತೆ ಅಪಘಾತದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ಸಹ ಕಲಾವಿದ ಮೃತ್ಯು…!!

