ಸುಳ್ಯ :ರಾತ್ರಿ ವೇಳೆ ಕಾರು ನಿಲ್ಲಿಸಿದವರಿಗೆ ಶಾಕ್; ಮುಖಕ್ಕೆ ಖಾರದ ಪುಡಿ ಎರಚಿ ಸುಲಿಗೆಗೆ ಯತ್ನ!; ಐವರ್ನಾಡು ಸಮೀಪ ನಡೆದ ಘೋರ ಕೃತ್ಯ!
ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪುತ್ತಿಲ ಎಂಬಲ್ಲಿ ಶುಕ್ರವಾರ ತಡರಾತ್ರಿ ಸಂಚರಿಸುತ್ತಿದ್ದ ಪ್ರಯಾಣಿಕರೊಬ್ಬರ ಮೇಲೆ ಅಪರಿಚಿತರು ಖಾರದ ಪುಡಿ ಎರಚಿ ಸುಲಿಗೆಗೆ ಯತ್ನಿಸಿದ ಆಘಾತಕಾರಿ ಘಟನೆ ಸಂಭವಿಸಿದೆ. ಹೈವೇಯಲ್ಲಿ ಕಾರು ನಿಲ್ಲಿಸಿ ಇಳಿಯುವ ಸಾರ್ವಜನಿಕರಲ್ಲಿ ಈ ಘಟನೆ ತೀವ್ರ ಆತಂಕ ಮೂಡಿಸಿದೆ.
ಘಟನೆಯ ವಿವರ: ನೀಲಗಿರಿ ಜಿಲ್ಲೆಯ ಗುಡಲೂರು ನಿವಾಸಿ ಅರುಣ್ ಕುಮಾರ್ ಅವರು ಸುಳ್ಯ ಕಡೆಯಿಂದ ಬೆಳ್ಳಾರೆ ಮಾರ್ಗವಾಗಿ ಮರ್ದಾಳಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ರಾತ್ರಿ ಪುತ್ತಿಲ ಸಮೀಪ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗಾಗಿ ಕೆಳಗಿಳಿದಿದ್ದರು. ಈ ವೇಳೆ ವಿಶಿಲ್ ಶಬ್ದ ಕೇಳಿಬಂದಿದ್ದು, ಅರುಣ್ ಕುಮಾರ್ ಅವರು ತಕ್ಷಣ ಕಾರು ಹತ್ತಲು ಯತ್ನಿಸಿದ್ದಾರೆ. ಆ ಕ್ಷಣದಲ್ಲೇ ಅಪರಿಚಿತರು ಎಸೆದ ಕಲ್ಲೊಂದು ಕಾರಿನ ಮುಂಭಾಗದ ಗ್ಲಾಸ್ಗೆ ಬಿದ್ದು ಗ್ಲಾಸ್ ನಜ್ಜುಗುಜ್ಜಾಗಿದೆ.
ಖಾರದ ಪುಡಿ ಎರಚಿದ ದುಷ್ಕರ್ಮಿಗಳು: ಗಾಬರಿಗೊಂಡ ಅರುಣ್ ಕಾರು ಚಲಾಯಿಸಲು ಮುಂದಾದಾಗ, ಬೈಕ್ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಅವರ ಕಾಲರ್ ಹಿಡಿದು ಎಳೆದಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ ಅರುಣ್ ಅವರ ಮುಖಕ್ಕೆ ಖಾರದ ಪುಡಿ ಎರಚಿ ಸುಲಿಗೆ ಮಾಡಲು ಯತ್ನಿಸಿದ್ದಾರೆ. ಆದರೆ, ಅರುಣ್ ಕುಮಾರ್ ಅವರು ಧೈರ್ಯಗುಂದದೆ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಕಾರು ಚಲಾಯಿಸಿ ಮುಂದೆ ಸಾಗಿದ್ದಾರೆ. ದಾರಿಯಲ್ಲಿ ಸಿಕ್ಕ ಸಾರ್ವಜನಿಕರಿಗೆ ವಿಷಯ ತಿಳಿಸಿ, 112 ಪೊಲೀಸ್ ಸಹಾಯವಾಣಿಗೂ ಕರೆ ಮಾಡಿದ್ದಾರೆ.
ಪೊಲೀಸರ ಭೇಟಿ: ಮಾಹಿತಿ ತಿಳಿಯುತ್ತಿದ್ದಂತೆ ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಈ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

