US-Iran War : ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವು ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈಗ ಎರಡೂ ದೇಶಗಳ ನಡುವೆ ಮಾತಿನ ಚಕಮಕಿ ತಾರಕಕ್ಕೇರಿದೆ. ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಮಧ್ಯಪ್ರಾಚ್ಯದ ದುಷ್ಟ ಶಕ್ತಿಗಳನ್ನು ಮಟ್ಟಹಾಕಲು ನಾವು ಹೊರಟಿದ್ದೇವೆ ಮತ್ತು ಈ ಯುದ್ಧವು ಅತಿ ಶೀಘ್ರದಲ್ಲೇ ಮುಕ್ತಾಯವಾಗಲಿದೆ” ಎಂದು ಹೇಳಿಕೆ ನೀಡಿದ್ದರು. ಈ ಮಾತುಗಳು ಇರಾನ್ ಸೇನೆಯನ್ನು ಕೆರಳಿಸಿದ್ದು, ಟ್ರಂಪ್ ಅವರ ಹೇಳಿಕೆಗೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಟ್ರಂಪ್ ಅವರ ಹೇಳಿಕೆಯನ್ನು ತಳ್ಳಿಹಾಕಿರುವ ಇರಾನ್, ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕು ಎಂಬ ಶಕ್ತಿ ಅಮೆರಿಕದ ಕೈಯಲ್ಲಿಲ್ಲ ಎಂದು ಗುಡುಗಿದೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಸೈನಿಕ ಕಾರ್ಯಾಚರಣೆಗಳು ಯಾವಾಗ ನಿಲ್ಲಬೇಕು ಎಂಬುದನ್ನು ಇರಾನ್ ದೇಶವೇ ನಿರ್ಧರಿಸುತ್ತದೆ ಹೊರತು ಬೇರೆ ಯಾರೂ ಅಲ್ಲ ಎಂದು ಇರಾನ್ ಸೇನೆ ಸ್ಪಷ್ಟಪಡಿಸಿದೆ. ಈ ಪ್ರದೇಶದ ಸಂಪೂರ್ಣ ನಿಯಂತ್ರಣ ಮತ್ತು ಭವಿಷ್ಯ ಈಗ ಇರಾನ್ ಸಶಸ್ತ್ರ ಪಡೆಗಳ ಕೈಯಲ್ಲಿದ್ದು, ಅಮೆರಿಕದ ಯಾವುದೇ ಬೆದರಿಕೆಗೆ ನಾವು ಬಗ್ಗುವುದಿಲ್ಲ ಎಂಬ ಸಂದೇಶವನ್ನು ಇರಾನ್ ರವಾನಿಸಿದೆ.
ಮತ್ತೊಂದೆಡೆ, ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಮತ್ತೊಂದು ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ. “ಇರಾನ್ ಹಾರ್ಮುಜ್ ಜಲಸಂಧಿಯೊಳಗೆ ತೈಲ ಹರಿವನ್ನು ನಿಲ್ಲಿಸುವ ಏನಾದರೂ ಮಾಡಿದರೆ, ಅವರು ಇಲ್ಲಿಯವರೆಗೆ ಅನುಭವಿಸಿದ್ದಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚು ಕಠಿಣವಾಗಿ ಅಮೆರಿಕದಿಂದ ಹೊಡೆಯಲ್ಪಡುತ್ತಾರೆ” ಎಂದು ಅಮೆರಿಕದ ಕಮಾಂಡರ್-ಇನ್-ಚೀಫ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ . ಇರಾನ್ ದೇಶವನ್ನು ಮತ್ತೆ ಎಂದೂ ಕಟ್ಟಲು ಸಾಧ್ಯವಾಗದ ರೀತಿಯಲ್ಲಿ ಧ್ವಂಸಗೊಳಿಸುತ್ತೇವೆ ಎಂದು ಟ್ರಂಪ್ ಹೇಳಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ. ಈ ಸಂಘರ್ಷದಿಂದಾಗಿ ವಿಶ್ವದ ತೈಲ ಮಾರುಕಟ್ಟೆ ತಲ್ಲಣಗೊಂಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿವೆ.

