Homeತಾಜಾ ಸುದ್ದಿBengaluru : ಸಾಲದ ಬಡ್ಡಿ ಕಟ್ಟಿಲ್ಲವೆಂದು ಮಹಿಳೆಯ ಅಪಹರಣ, ವಿವಸ್ತ್ರಗೊಳಿಸಿ ಹಲ್ಲೆ; ಇಬ್ಬರು ಮಹಿಳೆಯರು ಸೇರಿ...

Bengaluru : ಸಾಲದ ಬಡ್ಡಿ ಕಟ್ಟಿಲ್ಲವೆಂದು ಮಹಿಳೆಯ ಅಪಹರಣ, ವಿವಸ್ತ್ರಗೊಳಿಸಿ ಹಲ್ಲೆ; ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ!

ಬೆಂಗಳೂರು : ಕೈಸಾಲದ ಬಡ್ಡಿ ಹಾಗೂ ಕಂತು ಪಾವತಿಸಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ಅಪಹರಿಸಿ, ಚಾಕುವಿನಿಂದ ಇರಿದು, ವಿವಸ್ತ್ರಗೊಳಿಸಿ ವಿಡಿಯೋ ರೆಕಾರ್ಡ್ ಮಾಡಿ ಹಲ್ಲೆ ನಡೆಸಿದ ಆಘಾತಕಾರಿ ಪ್ರಕರಣವೊಂದು ನಗರದ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರೇಷ್ಮಾ ಬಾನು, ನಝಾತ್ ಮತ್ತು ಸುಹೇಲ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಈ ಹಿಂದೆ ಪರಿಚಿತಳಾಗಿದ್ದ ರೇಷ್ಮಾ ಬಾನು ಬಳಿ ಎರಡು ವರ್ಷಗಳ ಹಿಂದೆ ₹1 ಲಕ್ಷ ಸಾಲ ಪಡೆದಿದ್ದರು. ಬಳಿಕ ರೇಷ್ಮಾ ಮೂಲಕ ನಝಾತ್ ಎಂಬಾಕೆಯ ಪರಿಚಯವಾಗಿ, ಆಕೆಯ ಬಳಿಯೂ ₹50,000 ಸಾಲ ಪಡೆದಿದ್ದರು. ನಝಾತ್‌ಗೆ ತಿಂಗಳಿಗೆ ₹5,000 ಕಂತು ಹಾಗೂ ರೇಷ್ಮಾಗೆ ಬಡ್ಡಿಯನ್ನು ಮಹಿಳೆ ನಿಯಮಿತವಾಗಿ ಪಾವತಿಸುತ್ತಿದ್ದರು. ಆದರೆ ಇತ್ತೀಚೆಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದ್ದರಿಂದ ಕಳೆದ ಆರು ತಿಂಗಳಿಂದ ಬಡ್ಡಿ ಹಾಗೂ ಎರಡು ತಿಂಗಳಿಂದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ರೇಷ್ಮಾ ನಿರಂತರವಾಗಿ ಪೀಡಿಸುತ್ತಿದ್ದ ಕಾರಣ ಆಕೆಯ ನಂಬರ್ ಬ್ಲಾಕ್ ಮಾಡಿ, ಬಾಡಿಗೆ ಮನೆಯನ್ನು ಖಾಲಿ ಮಾಡಿ ತಾಯಿಯ ಮನೆಗೆ ತೆರಳಿದ್ದರು.

ಕೆಲಸವೊಂದಿದ್ದು ಹಣ ನೀಡುವುದಾಗಿ ನಂಬಿಸಿದ ಆರೋಪಿಗಳು ಸಂತ್ರಸ್ತೆಯನ್ನು ನಝಾತ್ ಅವರ ಮನೆಗೆ ಕರೆಸಿಕೊಂಡಿದ್ದಾರೆ. ಅಲ್ಲಿಗೆ ಬಂದ ರೇಷ್ಮಾ ಮತ್ತು ಆಕೆಯ ಪತಿ ಸುಹೇಲ್ ಮಹಿಳೆಯ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ನಂತರ ಚಾಕುವಿನಿಂದ ಬೆದರಿಸಿ ಆಟೋರಿಕ್ಷಾದಲ್ಲಿ ಕುಂಬಳಗೋಡು ಸಮೀಪದ ಮನೆಗೆ ಅಪಹರಿಸಿ ಕೊಂಡೊಯ್ದು ತೀವ್ರವಾಗಿ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಆಕೆಯ ಬಟ್ಟೆಗಳನ್ನು ಬಿಚ್ಚಿಸಿ ಬೆತ್ತಲೆಗೊಳಿಸಿ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಲ್ಲದೆ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಬೆದರಿಕೆ ಹಾಕಿದ್ದಾರೆ.

ಮಗಳು ಮನೆಗೆ ಬಾರದೆ ನಾಪತ್ತೆಯಾಗಿದ್ದರಿಂದ ಸಂತ್ರಸ್ತೆಯ ತಾಯಿ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ತಕ್ಷಣ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಂತ್ರಸ್ತೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದು, ಆಕೆಯ ದೂರಿನ ಮೇರೆಗೆ ಮೂವರನ್ನೂ ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments