ವಿಟ್ಲ : ಕೊಳ್ನಾಡು ಗ್ರಾಮದ ಸಾಲೆತ್ತೂರು ಪಾಲ್ತಾಜೆ ನಿವಾಸಿ, 62 ವರ್ಷದ ಆನಂದ ಪೂಜಾರಿ ಎಂಬ ವೃದ್ಧರಿಗೆ ಸ್ಥಳೀಯ ಯುವಕರ ಪಡೆ ಆರೈಕೆ ಮಾಡಿ ಹೊಸ ಜೀವನ ಕಲ್ಪಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದೆ.
ಕುಟುಂಬ ಹಾಗೂ ಬಂಧುಬಳಗವಿಲ್ಲದೆ ಒಂಟಿಯಾಗಿದ್ದ ಆನಂದ ಪೂಜಾರಿ ಅವರು ಬಸ್ ತಂಗುದಾಣ, ಅಂಗಡಿಗಳ ಜಗಲಿ ಹಾಗೂ ಸಮಾಜ ಮಂದಿರದಲ್ಲಿ ದಿನ ದೂಡುತ್ತಿದ್ದರು. ಕಳೆದ 5 ದಿನಗಳಿಂದ ಸಾಲೆತ್ತೂರು ಮೈದಾನದ ಬಳಿಯ ಸಮಾಜ ಮಂದಿರದ ಕತ್ತಲ ಕೋಣೆಯಲ್ಲಿ, ತ್ಯಾಜ್ಯಗಳ ರಾಶಿಯ ನಡುವೆ ಅಸ್ತಿಪಂಜರದಂತಾಗಿ ಸಾವು-ಬದುಕಿನ ನಡುವೆ ನರಳುತ್ತಿದ್ದರು.
ವಿಷಯ ತಿಳಿದ ವಿ.ಟಿ. ಪ್ರಸಾದ್ ಅವರು ಸ್ಥಳೀಯ ಯುವಕರಾದ ರಮೇಶ್ ನಂದರಬೆಟ್ಟು, ಸುಕೇಶ್ ಬರಿಮಾರು, ಜಯಂತ್, ಕಾರ್ತಿಕ್, ಹರೀಶ್ ಕಲ್ಲಮಜಲು ಹಾಗೂ ಜಯಂತ್ ಲೈಟಿಂಗ್ಸ್ ತಂಡವನ್ನು ಸಂಪರ್ಕಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಯುವಕರು ಕತ್ತಲ ಕೋಣೆಯಿಂದ ವೃದ್ಧನನ್ನು ಹೊರತಂದು, ಸ್ನಾನ ಮಾಡಿಸಿ, ಗಡ್ಡ-ಕೂದಲು ಬೋಳಿಸಿ, ಹೊಸ ಬಟ್ಟೆ ತೊಡಿಸಿದರು.
ಬಳಿಕ ಸಾಲೆತ್ತೂರು ಗಣೇಶೋತ್ಸವ ಸಮಿತಿಯ ಆಂಬುಲೆನ್ಸ್ ಹಾಗೂ ಫ್ರೆಂಡ್ಸ್ ವಿಟ್ಲ ಮುರಳೀಧರ ತಂಡದ ಸಹಕಾರದೊಂದಿಗೆ ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ನಡುವೆಯೂ ಪಂದ್ಯಾಟ ಬದಿಗೊತ್ತಿ ವೃದ್ಧನ ಸೇವೆಗೆ ನಿಂತ ಯುವಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನು ಓದಿ : Beltangady : ಗುರುವಾಯನಕೆರೆ ಸರಕಾರಿ ಪ್ರೌಢಶಾಲೆ ಮೈದಾನದ ಬಳಿ ಡ್ರಗ್ಸ್ ಮಾರಾಟ ಯತ್ನ; ಇಬ್ಬರ ಬಂಧನ!