ಉಡುಪಿ: ಅಪರಾಧ ಪ್ರಕರಣವೊಂದರ ಆರೋಪಿಗೆ ಜಾಮೀನು ಕೊಡಿಸಲು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ್ ಹಾಜರುಪಡಿಸಿದ ಭಾರಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಟ್ವಾಳದ ಉಮರ್ ಫಾರೂಕ್ ಹಾಗೂ ಮಂಗಳೂರಿನ ನಿಶಾಂತ್ ಕುಮಾರ್ ಎಂದು ಗುರುತಿಸಲಾಗಿದ್ದು, ನ್ಯಾಯಾಲಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಉಡುಪಿ ಜಿಲ್ಲಾ ನ್ಯಾಯಾಲಯದ ಆಡಳಿತಾಧಿಕಾರಿ ಅಬ್ಬಾಸ್ ಅವರು ನೀಡಿರುವ ದೂರಿನ ಪ್ರಕಾರ, ನೊಮಾನ್ ಎಂಬ ಆರೋಪಿಯ ಜಾಮೀನು ಪ್ರಕ್ರಿಯೆ ವೇಳೆ ಫಾರೂಕ್ ಎಂಬಾತ ಪ್ರಶಾಂತ್ ಎಂಬವರ ಆಧಾರ್ ಸಂಖ್ಯೆಯನ್ನು ಬಳಸಿ, ಕೆ.ಟಿ. ಮೊಹಮ್ಮದ್ ಎಂಬವರ ಹೆಸರು ಮತ್ತು ವಿಳಾಸವನ್ನು ಫೋರ್ಜರಿ ಮಾಡಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ್ದ. ಇದನ್ನು ಆಗಸ್ಟ್ 30, 2026 ರಂದು ನ್ಯಾಯಾಲಯಕ್ಕೆ ಸಲ್ಲಿಸಿ ವಂಚಿಸಲು ಯತ್ನಿಸಲಾಗಿತ್ತು.
ಕೋರ್ಟ್ ಹಾಗೂ ಅಸಲಿ ದಾಖಲೆ ಹೊಂದಿದ್ದ ವ್ಯಕ್ತಿಗಳಿಗೆ ವಂಚಿಸಿದ ಹಿನ್ನೆಲೆಯಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023 ಹಾಗೂ ಆಧಾರ್ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಕ್ರೈಂ ನಂ. 110/2026 ರಂತೆ ಪ್ರಕರಣ ದಾಖಲಾಗಿತ್ತು.
ಉಡುಪಿ ನಗರ ಠಾಣೆ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಪಿ ಮಾರ್ಗದರ್ಶನದಲ್ಲಿ ಪಿಎಸ್ಐ ರತ್ನಾಕರ್ ಕೆ ನೇತೃತ್ವದ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನು ಓದಿ : Mangaluru : ಮುಲ್ಕಿ ದೈವಸ್ಥಾನ ಕಳವು ಪ್ರಕರಣ ಭೇದಿಸಿದ ಪೊಲೀಸರು – 4 ಅಂತರ ಜಿಲ್ಲಾ ಕಳ್ಳರ ಬಂಧನ, ₹17.20 ಲಕ್ಷ ಮೌಲ್ಯದ ಸ್ವತ್ತು ವಶ!