Home ತಾಜಾ ಸುದ್ದಿ Bangladesh : ಬಾಂಗ್ಲಾದೇಶದಲ್ಲಿ ಬಸ್ ನದಿಗೆ ಬಿದ್ದು 24 ಮಂದಿ ಸಾವು, ನಾಪತ್ತೆಯಾದವರಿಗಾಗಿ ಹುಡುಕಾಟ

    Bangladesh : ಬಾಂಗ್ಲಾದೇಶದಲ್ಲಿ ಬಸ್ ನದಿಗೆ ಬಿದ್ದು 24 ಮಂದಿ ಸಾವು, ನಾಪತ್ತೆಯಾದವರಿಗಾಗಿ ಹುಡುಕಾಟ

    0
    144
    Bangladesh: 24 dead after bus falls into river in Bangladesh, search underway for missing

    ಢಾಕಾ :  ಬಾಂಗ್ಲಾದೇಶದ ರಾಜಬರಿ ಜಿಲ್ಲೆಯ ದೌಲಡಿಯಾ ಟರ್ಮಿನಲ್‌ನಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದು, ಹಲವಾರು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಸುಮಾರು 40 ಪ್ರಯಾಣಿಕರನ್ನು ಹೊತ್ತು ಢಾಕಾಕ್ಕೆ ಹೊರಟಿದ್ದ ಬಸ್, ಸಾರಿಗೆ ಫೆರ್ರಿ (Ferry) ಹತ್ತಲು ಪ್ರಯತ್ನಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಪದ್ಮಾ ನದಿಗೆ ಉರುಳಿ ಬಿದ್ದಿದೆ. ಈ ಆಘಾತಕಾರಿ ಘಟನೆಯು ಸಂಜೆ 5:15ರ ಸುಮಾರಿಗೆ ನಡೆದಿದ್ದು, ಈದ್ ರಜೆಯ ನಂತರ ರಾಜಧಾನಿಗೆ ಮರಳುತ್ತಿದ್ದವರೇ ಬಸ್ಸಿನಲ್ಲಿ ಹೆಚ್ಚಾಗಿದ್ದರು ಎಂದು ತಿಳಿದುಬಂದಿದೆ.

    ಪೊಲೀಸ್ ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಸ್ ಫೆರ್ರಿ ಹತ್ತಲು ಸಿದ್ಧವಾಗುತ್ತಿದ್ದಾಗ ಪಾಂಟೂನ್‌ಗೆ ಮತ್ತೊಂದು ಸಣ್ಣ ಯುಟಿಲಿಟಿ ಫೆರ್ರಿ ಡಿಕ್ಕಿ ಹೊಡೆದಿದೆ. ಈ ಅನಿರೀಕ್ಷಿತ ಡಿಕ್ಕಿಯಿಂದಾಗಿ ಬಸ್ ಚಾಲಕ ಸ್ಟೀರಿಂಗ್ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದು, ಬಸ್ ನೇರವಾಗಿ ನದಿಗೆ ಬಿದ್ದಿದೆ. ಬಸ್ಸಿನಲ್ಲಿದ್ದ ಸುಮಾರು 11 ಪ್ರಯಾಣಿಕರು ಈಜಿ ದಡ ಸೇರುವಲ್ಲಿ ಅಥವಾ ಸ್ಥಳೀಯರಿಂದ ರಕ್ಷಿಸಲ್ಪಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಉಳಿದವರು ಬಸ್ಸಿನ ಒಳಗೇ ಸಿಲುಕಿಕೊಂಡು ಜಲಸಮಾಧಿಯಾಗಿದ್ದಾರೆ.

    ಅಗ್ನಿಶಾಮಕ ದಳ ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ಸುಮಾರು ಆರು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿದ್ದು, ಮಧ್ಯರಾತ್ರಿಯ ಹೊತ್ತಿಗೆ ‘ಹಮ್ಜಾ’ ಎಂಬ ಸಾಲ್ವೇಜ್ ಹಡಗಿನ ಕ್ರೇನ್ ಬಳಸಿ ಬಸ್ಸನ್ನು ನದಿಯಿಂದ ಹೊರತೆಗೆಯಲಾಗಿದೆ. ಈವರೆಗೆ ಒಟ್ಟು 24 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇದರಲ್ಲಿ 11 ಮಹಿಳೆಯರು, 6 ಪುರುಷರು ಮತ್ತು 5 ಮಕ್ಕಳು ಸೇರಿದ್ದಾರೆ. ಮೃತರ ಪೈಕಿ ಹೆಚ್ಚಿನವರು ಒಂದೇ ಕುಟುಂಬದ ಸದಸ್ಯರಾಗಿದ್ದು, ಸಂಬಂಧಿಕರು ಬಸ್ಸಿನ ಒಳಗಿದ್ದಾಗ ಕಣ್ಣೆದುರೇ ಬಸ್ ಮುಳುಗಿದ್ದನ್ನು ನೋಡಿ ಪಾರಾದವರು ಕಂಬನಿ ಮಿಡಿಯುತ್ತಿದ್ದಾರೆ.

    ಈ ಭೀಕರ ಘಟನೆಯ ಬಗ್ಗೆ ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ನಾಪತ್ತೆಯಾದವರ ಪತ್ತೆಗಾಗಿ ಶೋಧ ಕಾರ್ಯವನ್ನು ಚುರುಕುಗೊಳಿಸಲು ಆದೇಶಿಸಿದ್ದಾರೆ. ಅಲ್ಲದೆ, ಅಪಘಾತಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸದ್ಯಕ್ಕೆ ನದಿಯಲ್ಲಿ ನಾಪತ್ತೆಯಾಗಿರುವ ಇತರ ಪ್ರಯಾಣಿಕರಿಗಾಗಿ ಮಿಲಿಟರಿ ಮತ್ತು ಪೊಲೀಸರ ಸಹಾಯದೊಂದಿಗೆ ಶೋಧ ಕಾರ್ಯ ಮುಂದುವರಿದಿದೆ.

    LEAVE A REPLY

    Please enter your comment!
    Please enter your name here

    error: Content is protected !!