Friday, April 10, 2026
Homeತಾಜಾ ಸುದ್ದಿCM Siddaramaiah : ಕರ್ನಾಟಕದ ಹುಲಿಕಲ್ ಘಾಟ್‌ಗಳಲ್ಲಿ ರಸ್ತೆ ವಿಸ್ತರಣೆ ವೇಳೆ ಭೂಕುಸಿತ ಸಂಭವಿಸಿ 3...

CM Siddaramaiah : ಕರ್ನಾಟಕದ ಹುಲಿಕಲ್ ಘಾಟ್‌ಗಳಲ್ಲಿ ರಸ್ತೆ ವಿಸ್ತರಣೆ ವೇಳೆ ಭೂಕುಸಿತ ಸಂಭವಿಸಿ 3 ಮಂದಿ ಸಾವು, ಪರಿಹಾರ ಘೋಷಿಸಿದ ಮುಖ್ಯಮಂತ್ರಿ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ಮಣ್ಣು ಕುಸಿತಕ್ಕೆ ಮೂವರು ಕಾರ್ಮಿಕರು ಬಲಿಯಾಗಿದ್ದಾರೆ. ಘಾಟ್ ರಸ್ತೆಯ ಹೇರ್‌ಪಿನ್ ಬೆಂಡ್ ಬಳಿ ವಾಹನಗಳ ಸುರಕ್ಷತೆಗಾಗಿ ತಡೆಗೋಡೆ ನಿರ್ಮಿಸುವ ಕೆಲಸ ನಡೆಯುತ್ತಿದ್ದ ವೇಳೆ ಮೇಲ್ಭಾಗದಿಂದ ಬೃಹತ್ ಪ್ರಮಾಣದ ಮಣ್ಣು ಮತ್ತು ಕಲ್ಲುಗಳು ಏಕಾಏಕಿ ಕಾರ್ಮಿಕರ ಮೇಲೆ ಕುಸಿದಿವೆ. ಈ ದುರಂತದಲ್ಲಿ ರಾಘವೇಂದ್ರ (37), ರಾಜು (30) ಮತ್ತು ಶಬ್ಬೀರ್ (40) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಮಗಾರಿಯಲ್ಲಿ ತೊಡಗಿದ್ದ ಒಟ್ಟು ಏಳು ಮಂದಿ ಮಣ್ಣಿನಡಿ ಸಿಲುಕಿದ್ದು, ನಾಲ್ವರನ್ನು ರಕ್ಷಣಾ ತಂಡಗಳು ಸಾಹಸಪಟ್ಟು ಪ್ರಾಣಾಪಾಯದಿಂದ ಪಾರುಮಾಡಿವೆ.

ಘಟನೆ ನಡೆದ ತಕ್ಷಣವೇ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದರು. ಮಂಗಳೂರಿನಿಂದ ಆಗಮಿಸಿದ ಎಸ್‌ಡಿಆರ್‌ಎಫ್ (SDRF) ತಂಡ ಕೂಡ ಪರಿಹಾರ ಕಾರ್ಯದಲ್ಲಿ ಭಾಗಿಯಾಗಿದೆ. ಗಾಯಗೊಂಡ ನಾಲ್ವರು ಕಾರ್ಮಿಕರನ್ನು ಕೂಡಲೇ ಕುಂದಾಪುರ ಮತ್ತು ಉಡುಪಿಯ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಣ್ಣು ಮತ್ತು ಕಲ್ಲುಗಳು ಸಡಿಲವಾಗಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದ್ದು, ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರ ರಕ್ಷಣೆಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಈ ಘಟನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಂದ ಘಟನೆಯ ಸಂಪೂರ್ಣ ಮಾಹಿತಿ ಪಡೆದಿರುವ ಅವರು, ಕುಟುಂಬಕ್ಕೆ ಆಧಾರವಾಗಿದ್ದ ಜೀವಗಳು ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದ್ದಾರೆ. ಮಾನವೀಯತೆಯ ಆಧಾರದ ಮೇಲೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಸಿಎಂ ಘೋಷಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!