Home ತಾಜಾ ಸುದ್ದಿ KH Muniyappa : ಆಟೋ ಗ್ಯಾಸ್ ಪೂರೈಕೆ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವಂತೆ ಕೇಂದ್ರಕ್ಕೆ ಕರ್ನಾಟಕದ...

    KH Muniyappa : ಆಟೋ ಗ್ಯಾಸ್ ಪೂರೈಕೆ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವಂತೆ ಕೇಂದ್ರಕ್ಕೆ ಕರ್ನಾಟಕದ ಸಚಿವರು ಒತ್ತಾಯ

    0
    48
    KH Muniyappa : Karnataka ministers urge the Center to resolve the auto gas supply problem as soon as possible

    ಬೆಂಗಳೂರು :  ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಆಟೋ ಎಲ್‌ಪಿಜಿ (Auto LPG) ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಆಟೋ ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ತೈಲ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅವರು, ಈ ಗಂಭೀರ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಚಾಲಕರು ಇಂಧನಕ್ಕಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದ್ದು, ಆಟೋ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.

    ಸಂಕಷ್ಟದಲ್ಲಿ 3 ಲಕ್ಷ ಆಟೋ ಚಾಲಕರು: ರಾಜ್ಯದಲ್ಲಿ ಚಲಿಸುತ್ತಿರುವ ಒಟ್ಟು ಐದು ಲಕ್ಷ ಆಟೋಗಳಲ್ಲಿ ಸುಮಾರು ಮೂರು ಲಕ್ಷ ಆಟೋಗಳು ಗ್ಯಾಸ್ ಮೇಲೆ ಅವಲಂಬಿತವಾಗಿವೆ. ಇವುಗಳಲ್ಲಿ 1.6 ಲಕ್ಷ ಆಟೋಗಳು ಕೇವಲ ಬೆಂಗಳೂರಿನಲ್ಲೇ ಇವೆ. ಇಡೀ ದೇಶದಲ್ಲೇ ಕರ್ನಾಟಕವು ಗ್ಯಾಸ್ ಆಧಾರಿತ ಅತಿ ಹೆಚ್ಚು ಆಟೋಗಳನ್ನು ಹೊಂದಿದೆ ಎಂದು ಸಚಿವರು ತಿಳಿಸಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯ ಕಾರ್ಯದರ್ಶಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದರೂ, ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಖಾಸಗಿ ಕಂಪನಿಗಳ ವೈಫಲ್ಯ – ಸರ್ಕಾರಿ ಬಂಕ್‌ಗಳ ಮೇಲೆ ಒತ್ತಡ: ರಾಜ್ಯದ ಒಟ್ಟು ಆಟೋ ಗ್ಯಾಸ್ ಬೇಡಿಕೆಯಲ್ಲಿ ಶೇ. 65 ರಷ್ಟನ್ನು ಖಾಸಗಿ ಕಂಪನಿಗಳು ಪೂರೈಸುತ್ತವೆ. ಆದರೆ ಪ್ರಸ್ತುತ ಖಾಸಗಿ ಕಂಪನಿಗಳು ಪೂರೈಕೆ ಸ್ಥಗಿತಗೊಳಿಸಿರುವುದರಿಂದ ಅಥವಾ ಬೆಲೆ ಏರಿಕೆ ಮಾಡಿರುವುದರಿಂದ ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್‌ಗಳ ಮೇಲೆ ಅತಿಯಾದ ಒತ್ತಡ ಬಿದ್ದಿದೆ. ಪ್ರತಿದಿನ ರಾಜ್ಯಕ್ಕೆ 280 ಮೆಟ್ರಿಕ್ ಟನ್ ಗ್ಯಾಸ್ ಅಗತ್ಯವಿದ್ದು, ಕೇವಲ 60 ಮೆಟ್ರಿಕ್ ಟನ್ ಮಾತ್ರ ಸರ್ಕಾರಿ ಕಂಪನಿಗಳಿಂದ ಪೂರೈಕೆಯಾಗುತ್ತಿದೆ. ಉಳಿದ 220 ಮೆಟ್ರಿಕ್ ಟನ್ ಪೂರೈಸಬೇಕಾದ ಖಾಸಗಿ ಕಂಪನಿಗಳು ಕೈಕೊಟ್ಟಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಕೇಂದ್ರದ ಹೊಣೆಗಾರಿಕೆ ಮತ್ತು ಮುಂದಿನ ಕ್ರಮ: ಗ್ಯಾಸ್ ಪೂರೈಕೆಯು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ, ಕೇಂದ್ರ ಪೆಟ್ರೋಲಿಯಂ ಸಚಿವರು ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಮುನಿಯಪ್ಪ ಒತ್ತಾಯಿಸಿದ್ದಾರೆ. ಅಲ್ಲದೆ, ಗ್ಯಾಸ್ ಅಭಾವವನ್ನು ಬಳಸಿಕೊಂಡು ಕಾಳದಂಧೆ ನಡೆಸುವವರ ಅಥವಾ ಹೆಚ್ಚಿನ ಬೆಲೆ ವಸೂಲಿ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಮನವಿ ಮಾಡಲಾಗಿದೆ. ಇದರೊಂದಿಗೆ, ಮನೆ ಬಳಕೆಯ ಗ್ಯಾಸ್ ಸಿಲಿಂಡರ್ ವಿತರಣೆಯಲ್ಲೂ ಗೊಂದಲ ತಪ್ಪಿಸಲು ಬುಕಿಂಗ್ ಮಾಡಿದ 26ನೇ ದಿನಕ್ಕೆ ಪೂರೈಕೆ ಮಾಡುವಂತೆ ಕಂಪನಿಗಳಿಗೆ ಸೂಚನೆ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

    LEAVE A REPLY

    Please enter your comment!
    Please enter your name here

    error: Content is protected !!