ನವದೆಹಲಿ: ರಾಜಸ್ಥಾನದ ಜೈಪುರದಿಂದ ನವದೆಹಲಿಗೆ ಆಗಮಿಸುತ್ತಿದ್ದ ಸ್ಲೀಪರ್ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 23 ಮಂದಿ ಗಾಯಗೊಂಡಿರುವ ಘಟನೆ ಕೇಂದ್ರ ದೆಹಲಿಯ ಕರೋಲ್ ಬಾಗ್ ಪ್ರದೇಶದ ಹನುಮಾನ್ ಮಂದಿರದ ಬಳಿ ಬುಧವಾರ ಮುಂಜಾನೆ ನಡೆದಿದೆ.
ಘಟನೆಯ ವಿವರ: ಬುಧವಾರ ಮುಂಜಾನೆ ಸುಮಾರು 1 ಗಂಟೆಯ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಸುಮಾರು 30 ಪ್ರಯಾಣಿಕರನ್ನು ಹೊತ್ತು ಜೈಪುರದಿಂದ ಬರುತ್ತಿದ್ದ ಬಸ್, ಕರೋಲ್ ಬಾಗ್ ತಲುಪುತ್ತಿದ್ದಂತೆ ಹನುಮಾನ್ ಮಂದಿರದ ಬಳಿ ಪಲ್ಟಿಯಾಗಿದೆ. ಘಟನೆಯಿಂದಾಗಿ ಪ್ರಯಾಣಿಕರು ಬಸ್ಸಿನೊಳಗೆ ಸಿಲುಕಿಕೊಂಡು ಕಿರುಚಾಡುತ್ತಿದ್ದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಕರೋಲ್ ಬಾಗ್ ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬಸ್ಸಿನ ಅಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆಯಲು ಹತ್ತಿರದಲ್ಲಿದ್ದ ಜೆಸಿಬಿ ಯಂತ್ರವನ್ನು ಬಳಸಲಾಯಿತು.
ಸಾವು-ನೋವು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 10 ಜನರನ್ನು ಸರ್ ಗಂಗಾರಾಮ್ ಆಸ್ಪತ್ರೆಗೆ, 12 ಜನರನ್ನು ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಗೆ ಮತ್ತು ಒಬ್ಬರನ್ನು ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಪುರುಷರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರ ಪೈಕಿ ಒಬ್ಬರನ್ನು ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ಶೆಹಬಾಜ್ ಆಲಂ (30) ಎಂದು ಗುರುತಿಸಲಾಗಿದೆ. ಸುಮಾರು 20 ವರ್ಷ ಪ್ರಾಯದ ಮತ್ತೊಬ್ಬ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಬೇಕಿದೆ.
ಚಾಲಕ ವಶಕ್ಕೆ: ಅಪಘಾತಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಅಲ್ವಾರ್ ನಿವಾಸಿ, ಬಸ್ ಚಾಲಕ ಪಂಕಜ್ ಕುಮಾರ್ (26) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಚಾಲಕ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿಚಾರಣೆ ಪೂರ್ಣಗೊಂಡ ನಂತರ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರು, ಅಗ್ನಿಶಾಮಕ ದಳ ಮತ್ತು ಪೊಲೀಸರ ತ್ವರಿತ ಕಾರ್ಯಾಚರಣೆಯಿಂದಾಗಿ ಹೆಚ್ಚಿನ ಪ್ರಾಣಾಪಾಯ ತಪ್ಪಿದೆ ಎಂದು ಅಧಿಕಾರಿಗಳು ಶ್ಲಾಘಿಸಿದ್ದಾರೆ.

