Home ತಾಜಾ ಸುದ್ದಿ Ayodhya | ಫೋನ್ ಮೂಲಕವೇ ಮಗುವಿಗೆ ಜನ್ಮ ನೀಡಿದ ಮಹಿಳೆ; ತಾಯಿ ಮತ್ತು ಮಗು ಇಬ್ಬರೂ...

    Ayodhya | ಫೋನ್ ಮೂಲಕವೇ ಮಗುವಿಗೆ ಜನ್ಮ ನೀಡಿದ ಮಹಿಳೆ; ತಾಯಿ ಮತ್ತು ಮಗು ಇಬ್ಬರೂ ಸಾವು!

    0
    51
    Ayodhya | Woman gives birth to baby over phone; Both mother and baby die!

    ಅಯೋಧ್ಯೆ :  ಅಯೋಧ್ಯೆಯ ಫೈಜಾಬಾದ್ ನಗರದ ‘ಮಾ ಪರಮೇಶ್ವರಿ ದೇವಿ ಮೆಮೋರಿಯಲ್ ಆಸ್ಪತ್ರೆ’ಯಲ್ಲಿ ಈ ಘಟನೆ ಸಂಭವಿಸಿದೆ. ಸೋನಿ ಯಾದವ್ ಎಂಬ ಮಹಿಳೆ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆಯ ಸಮಯದಲ್ಲಿ ಮುಖ್ಯ ವೈದ್ಯೆ ಅಂಜಲಿ ಶ್ರೀವಾಸ್ತವ ಅವರು ಆಸ್ಪತ್ರೆಯಲ್ಲಿ ಇರಲಿಲ್ಲ. ಬದಲಿಗೆ, ಅಲ್ಲಿನ ಸಿಬ್ಬಂದಿಯೊಬ್ಬರು ಫೋನ್ ಮೂಲಕ ವೈದ್ಯರಿಂದ ಸೂಚನೆ ಪಡೆಯುತ್ತಾ ಹೆರಿಗೆ ಪ್ರಕ್ರಿಯೆ ನಡೆಸಿದ್ದಾರೆ. ಆದರೆ, ಹೆರಿಗೆಯಾದ ಕೆಲವೇ ಸಮಯದಲ್ಲೇ ಮಗು ಉಸಿರಾಡುತ್ತಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಮಗುವನ್ನು ಹತ್ತಿರದ ಮತ್ತೊಬ್ಬ ವೈದ್ಯರ ಬಳಿ ಕರೆದೊಯ್ದಾಗ ಮಗು ಈಗಾಗಲೇ ಮೃತಪಟ್ಟಿರುವುದು ದೃಢಪಟ್ಟಿದೆ.

    ಮಗುವಿನ ಸಾವಿನ ಬೆನ್ನಲ್ಲೇ ತಾಯಿ ಸೋನಿ ಯಾದವ್ ಅವರ ಆರೋಗ್ಯವೂ ತೀವ್ರವಾಗಿ ಹದಗೆಟ್ಟಿದೆ. ಅವರನ್ನು ತಕ್ಷಣವೇ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ತಲುಪುವಷ್ಟರಲ್ಲಿ ಅವರು ಕೂಡ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ಯಾವುದೇ ಅರ್ಹ ವೈದ್ಯರು ಇಲ್ಲದೆ ಕೇವಲ ತರಬೇತಿ ಪಡೆಯದ ಸಿಬ್ಬಂದಿ ಮೂಲಕ ಹೆರಿಗೆ ಮಾಡಿಸಿರುವುದು ಈ ಇಬ್ಬರ ಸಾವಿಗೆ ನೇರ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋನಿ ಅವರು ಕಳೆದ ವರ್ಷವಷ್ಟೇ ಮದುವೆಯಾಗಿದ್ದು, ಇದು ಅವರ ಮೊದಲ ಮಗುವಾಗಿತ್ತು. ಒಂದು ಸುಂದರ ಕುಟುಂಬದ ಕನಸು ಆಸ್ಪತ್ರೆಯ ಬೇಜವಾಬ್ದಾರಿಯಿಂದ ನುಚ್ಚುನೂರಾಗಿದೆ.

    ಈ ದೂರಿನ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ತಂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ತನಿಖೆಯ ವೇಳೆ ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು ಅಥವಾ ನುರಿತ ವೈದ್ಯಕೀಯ ಸಿಬ್ಬಂದಿ ಇರಲಿಲ್ಲ. ಕೇವಲ ಮಹೇಶ್ ಸಿಂಗ್ ಎಂಬ ವ್ಯವಸ್ಥಾಪಕ ಆಸ್ಪತ್ರೆಯನ್ನು ನೋಡಿಕೊಳ್ಳುತ್ತಿದ್ದ ಎಂಬುದು ಬಯಲಾಗಿದೆ. ಆಸ್ಪತ್ರೆಯ ದಾಖಲೆಗಳು ಅಪೂರ್ಣವಾಗಿದ್ದು, ವೈದ್ಯರ ಅರ್ಹತಾ ಪತ್ರಗಳೂ ಅಲ್ಲಿರಲಿಲ್ಲ. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆಸ್ಪತ್ರೆಯನ್ನು ಸೀಲ್ ಮಾಡಿದ್ದಾರೆ. ಸದ್ಯ ವೈದ್ಯೆ ಅಂಜಲಿ ಶ್ರೀವಾಸ್ತವ ನಾಪತ್ತೆಯಾಗಿದ್ದು, ಪೊಲೀಸರು ಮತ್ತು ಆರೋಗ್ಯ ಇಲಾಖೆ ತನಿಖೆ ಮುಂದುವರಿಸಿದೆ.

    LEAVE A REPLY

    Please enter your comment!
    Please enter your name here

    error: Content is protected !!