ಕಾಪು, ಅಕ್ಟೋಬರ್ 23 : ಮಂಗಳೂರಿನಿಂದ ಉಡುಪಿಯತ್ತ ತೆರಳುತ್ತಿದ್ದ ವಿಜಯಲಕ್ಷ್ಮಿ ಎಕ್ಸ್ಪ್ರೆಸ್ ಬಸ್ಸಿನ ಚಾಲಕನಿಗೆ ಹಠಾತ್ ಆರೋಗ್ಯ ಸಮಸ್ಯೆ ಎದುರಾದರೂ, ಸಮಯೋಚಿತವಾಗಿ ಬಸ್ಸನ್ನು ರಸ್ತೆ ಬದಿಯ ಮರಕ್ಕೆ ತಿರುಗಿಸಿ ದೊಡ್ಡ ದುರಂತವನ್ನು ತಪ್ಪಿಸಿರುವ ಘಟನೆ ಗುರುವಾರ ಮುಲೂರಿನಲ್ಲಿ ನಡೆದಿದೆ.
ಮಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ಬಸ್ ಮುಲೂರು ತಲುಪುತ್ತಿದ್ದಂತೆ ಚಾಲಕನಿಗೆ ಹಠಾತ್ ಅಸ್ವಸ್ಥತೆ ಉಂಟಾಗಿದ್ದು, ಬಸ್ ನಿಯಂತ್ರಣ ತಪ್ಪಿ ಎಡಭಾಗಕ್ಕೆ ವಾಲಿದೆ.
ಆರೋಗ್ಯದಲ್ಲಿ ತೀವ್ರ ಏರುಪೇರಾದರೂ ಎಚ್ಚೆತ್ತುಕೊಂಡ ಚಾಲಕ, ತಕ್ಷಣವೇ ಬಸ್ಸನ್ನು ರಸ್ತೆಯ ಎಡಭಾಗಕ್ಕೆ ತಿರುಗಿಸುವ ಮೂಲಕ ಸಂಭವಿಸಬಹುದಿದ್ದ ದೊಡ್ಡ ಅಪಘಾತವನ್ನು ಯಶಸ್ವಿಯಾಗಿ ತಡೆದಿದ್ದಾರೆ.
ಬಸ್ ಮೊದಲು ಹೆದ್ದಾರಿ ಬದಿಯ ಮರಕ್ಕೆ ಡಿಕ್ಕಿಹೊಡೆದು, ನಂತರ ಮುಂದೆ ಸಾಗಿ ದೊಡ್ಡ ಮರಕ್ಕೆ ಗುದ್ದಿ ನಿಂತಿದೆ.
ಒಂದು ವೇಳೆ ಬಸ್ ಸ್ವಲ್ಪ ಎತ್ತರಕ್ಕೆ ಅಥವಾ ಇತ್ತ ಕಡೆ ವಾಲಿದ್ದರೆ ಸಮೀಪದಲ್ಲಿದ್ದ ಎರಡು ವಿದ್ಯುತ್ ಕಂಬಗಳಿಗೆ ಅಪ್ಪಳಿಸುತ್ತಿತ್ತು. ಹಾಗೊಮ್ಮೆ ಆಗಿದ್ದರೆ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಭಾರೀ ಅಪಾಯ ಸಂಭವಿಸುವ ಸಾಧ್ಯತೆಯಿತ್ತು.
ಈ ಅಪಘಾತದಲ್ಲಿ ಬಸ್ನಲ್ಲಿದ್ದ ಎಲ್ಲ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರತಿಯೊಬ್ಬರೂ ಯಾವುದೇ ಗಂಭೀರ ಹಾನಿಯಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಠಾತ್ ಆರೋಗ್ಯ ತುರ್ತು ಪರಿಸ್ಥಿತಿಯಲ್ಲೂ ಚಾಲಕ ಪ್ರದರ್ಶಿಸಿದ ಸಂಯಮ ಮತ್ತು ಸಮಯ್ಸ್ಪೂರ್ತಿ ಪ್ರಯಾಣಿಕರ ಜೀವ ಉಳಿಸಲು ಅತ್ಯಂತ ನಿರ್ಣಾಯಕವಾಯಿತು.
ಇದನ್ನು ಓದಿ : Bengaluru : ವಿಧಾನಸೌಧ ಸ್ಫೋಟಿಸಿದಂತೆ AI ವೀಡಿಯೊ ಪೋಸ್ಟ್ — ಆರೋಪಿ ಬಂಧನ!