ಉಡುಪಿ: ಸಾಮಾಜಿಕ ಕಾರ್ಯಕರ್ತ ಹಾಗೂ ಜಮೀಯತುಲ್ ಫಲಾಹ್ ಉಡುಪಿ ತಾಲೂಕು ಘಟಕದ ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್ ಮಲ್ಪೆ (68) ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ನಿಧನರಾಗಿದ್ದಾರೆ.
ಖತೀಬ್ ಅಬ್ದುಲ್ ರಶೀದ್ ಅವರು ಸಮುದಾಯ, ಸಮಾಜ ಮತ್ತು ಕೋಮು ಸಾಮರಸ್ಯದ ಉತ್ತೇಜನದಂತಹ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದ್ದ ಅವರು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಸ್ಥಾಪಕ ಸದಸ್ಯರು ಹಾಗೂ ಮಾಜಿ ಉಪಾಧ್ಯಕ್ಷರಾಗಿ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ವೇದಿಕೆಯ ಅಧ್ಯಕ್ಷರಾಗಿ, ಸಹಬಾಳ್ವೆ ಸಂಘಟನೆಯ ಆರಂಭಿಕ ಸದಸ್ಯರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸಿದ್ದರು.
‘ಕೋಮು ಸೌಹಾರ್ದ ವೇದಿಕೆ’ಯ ಸಕ್ರಿಯ ಸದಸ್ಯರಾಗಿರುವ ಅವರು, ಸಯ್ಯಿದಿನಾ ಅಬೂ ಬಕರ್ ಸಿದ್ದೀಕ್ ಜಾಮಿಯಾ ಮಸೀದಿಯ ಅಧ್ಯಕ್ಷರಾಗಿ ಹಾಗೂ ಎಸ್.ಐ.ಒ. (SIO) ನ ಮಲ್ಪೆ ಶಾಖೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರಾರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ‘ಸಹಬಾಳ್ವೆ’ಯ ಸಂಚಾಲಕ ಪ್ರೊ. ಫಣಿರಾಜ್, ಜಮಾಅತೆ ಇಸ್ಲಾಮೀ ಹಿಂದ್ನ ಉಡುಪಿ ಜಿಲ್ಲಾ ಅಧ್ಯಕ್ಷ ಪ್ರೊ. ಅಬ್ದುಲ್ ಅಡ್ಕೂರ್, ಎಪಿಸಿಆರ್ (APCR) ರಾಜ್ಯ ಕಾರ್ಯದರ್ಶಿ ಹುಸೈನ್ ಕೋಡಿಬೆಂಗ್ರೆ, ಸಾಲಿಹಾತ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಹಾಗೂ ವೆಲ್ಫೇರ್ ಪಾರ್ಟಿಯ ಉಡುಪಿ ಜಿಲ್ಲಾ ಅಧ್ಯಕ್ಷ ಇದ್ರೀಸ್ ಹೂಡೆ ಅವರು, ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : Kaup : ಚಾಲಕನಿಗೆ ಹಠಾತ್ ಅಸ್ವಸ್ಥತೆ; ಮರಕ್ಕೆ ಬಸ್ ಗುದ್ದಿಸಿ ಪ್ರಯಾಣಿಕರ ಜೀವ ಉಳಿಸಿದ ಚಾಲಕ!