ಮಂಗಳೂರು: ಆ್ಯಪ್ ಡೌನ್‌ಲೋಡ್ ಮಾಡಿದರೆ ಎಲ್ಲಾ ಟಿವಿ ಚಾನೆಲ್ ಉಚಿತವಾಗಿ ನೋಡಬಹುದು ಎನ್ನುವ ಜಾಹೀರಾತನ್ನು ನಂಬಿ ವ್ಯಕ್ತಿಯೊಬ್ಬರು 1.78 ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಅಕ್ಟೋಬರ್ 15ರಂದು ಮನೆಯಲ್ಲಿ ಫೇಸ್‌ಬುಕ್ ನೋಡುತ್ತಾ ಇದ್ದಾಗ ‘ಎಕ್ಸ್‌ಎಂ ಟಿವಿ’ ಎಂಬ ಜಾಹೀರಾತಿನಲ್ಲಿ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡರೆ ಎಲ್ಲಾ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ನೋಡಬಹುದು ಎಂದು ತಿಳಿಸಲಾಗಿತ್ತು. ಅದನ್ನು ನಂಬಿದ ಅವರು ಆ್ಯಪ್ ಮೇಲೆ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿದ್ದಾರೆ.
ಅಕ್ಟೋಬರ್ 16ರಂದು ಅವರ ಎರಡು ಖಾತೆಯಿಂದ 98,000 ರೂ. ಹಾಗೂ 30,191 ರೂ., ಮತ್ತು 17ರಂದು 50 ಸಾವಿರ ರೂ. ಅವರಿಗೆ ಗೊತ್ತಿಲ್ಲದೆ ಯಾವುದೇ ಅಪರಿಚಿತ ಖಾತೆಗೆ ವರ್ಗಾವಣೆಯಾಗಿದೆ.ಅಕ್ಟೋಬರ್ 18ರಂದು ಅಕೌಂಟ್ ಬ್ಯುಲೆನ್ಸ್ ಚೆಕ್ ಮಾಡಿದಾಗ, ತನ್ನ ಖಾತೆಯಲ್ಲಿ ಯಾವುದೇ ಹಣ ಇಲ್ಲದಿರುವುದು ತಿಳಿದು ಬಂದಿದೆ. ಕೂಡಲೇ ಸೈಬರ್ ಠಾಣೆಗೆ ಬಂದು ಪರಿಶೀಲಿಸಿದಾಗ ಮೊಬೈಲ್‌ನಲ್ಲಿ ಎಪಿಕೆ ಫೈಲ್ ಡೌನ್‌ಲೋಡ್ ಆಗಿರುವುದು ಗೊತ್ತಾಗಿದೆ.
‘ಎಕ್ಸ್‌ಎಂ ಟಿವಿ’ ಆ್ಯಪ್ ಅನ್ನು ಡೌನ್‌ಲೋಡ್ ಮಾಡುವಾಗ ಅದರೊಂದಿಗೆ ಎಪಿಕೆ (APK) ಫೈಲ್ ಕೂಡ ಡೌನ್‌ಲೋಡ್ ಆಗಿದ್ದು, ಇದರ ಪರಿಣಾಮವಾಗಿ ಖಾತೆಯಿಂದ 1,78,191 ರೂಪಾಯಿಗಳು ವರ್ಗಾವಣೆಯಾಗಿವೆ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ. ಅನುಮತಿಯಿಲ್ಲದೆ ಹಣವನ್ನು ವರ್ಗಾಯಿಸುವ ಮೂಲಕ ವಂಚನೆ ಎಸಗಿದ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರುದಾರರು ಕೋರಿದ್ದಾರೆ.
ಇದನ್ನು ಓದಿ : Udupi : ಸಮಾಜ ಸೇವಕ, ಜಮೀಯತುಲ್ ಫಲಾಹ್ ತಾಲೂಕು ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್ ನಿಧನ!