Homeತಾಜಾ ಸುದ್ದಿUdupi : ಅಂಡರ್‌ವರ್ಲ್ಡ್ ಹೇಮಂತ್ ಪೂಜಾರಿ ಸಹಚರ ಬಂಧನ — 4.13 ಲಕ್ಷ ವಶ!

Udupi : ಅಂಡರ್‌ವರ್ಲ್ಡ್ ಹೇಮಂತ್ ಪೂಜಾರಿ ಸಹಚರ ಬಂಧನ — 4.13 ಲಕ್ಷ ವಶ!

ಉಡುಪಿ, ಅಕ್ಟೋಬರ್ 23: ಉಡುಪಿ ಜಿಲ್ಲೆಯ ಉದ್ಯಮಿಗಳು ಹಾಗೂ ಪ್ರಮುಖ ವ್ಯಕ್ತಿಗಳ ಮೊಬೈಲ್ ನಂಬರ್‌ಗಳು ಹಾಗೂ ಇತ್ಯಾದಿ ವಿವರಗಳನ್ನು ಅಂಡರ್‌ವರ್ಲ್ಡ್ ಕುಖ್ಯಾತ ಹೇಮಂತ್ ಪೂಜಾರಿಗೆ ಪೂರೈಸಿ, ಸುಲಿಗೆಗೆ ಸಾಥ್ ನೀಡುತ್ತಿದ್ದ 38 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೇಮಂತ್ ಪೂಜಾರಿ ಈ ಉದ್ಯಮಿಗಳಿಗೆ ಪ್ರಾಣ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುಲಿಗೆ ಬೆದರಿಕೆಗಳಿಗೆ ಸಂಬಂಧಿಸಿದಂತೆ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಐದು, ಹಾಗೂ ಶಿರವ, ಕಾಪು ಮತ್ತು ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ಈ ಠಾಣಾ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಉದ್ಯಮಿಗಳು ಹಾಗೂ ಗಣ್ಯರಿಗೆ ಕರೆ ಮಾಡಿದ್ದ ಹೇಮಂತ್ ಪೂಜಾರಿ, ಕೋಟ್ಯಂತರ ರೂ. ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.

ತನಿಖೆಯ ವೇಳೆ, ಕಾಪು ತಾಲೂಕಿನ ಯರ್ಮಲ್ ಬಾಡ ಗ್ರಾಮದ ಬತ್ರೋಟ ಹೌಸ್ ನಿವಾಸಿ ಸುರೇಶ್ ಅಮೀನ್ (38) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ವಿಕ್ಟಿಮ್‌ಗಳ ಮೊಬೈಲ್ ನಂಬರ್‌ಗಳು ಹಾಗೂ ಇತ್ಯಾದಿ ಖಾಸಗಿ ವಿವರಗಳನ್ನು ಹೇಮಂತ್ ಪೂಜಾರಿಗೆ ತಲುಪಿಸುವ ಕೃತ್ಯದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಹಣ ನೀಡಲು ನಿರಾಕರಿಸಿ ಫೋನ್ ಕಟ್ ಮಾಡಿದ್ದ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಲು ಸುರೇಶ್ ಅಮೀನ್ ಹಾಗೂ ಹೇಮಂತ್ ಪೂಜಾರಿ ಸಂಚು ರೂಪಿಸಿದ್ದರು ಎಂಬುದು ತಾಂತ್ರಿಕ ಸಾಕ್ಷ್ಯಗಳಿಂದ ಬೆಳಕಿಗೆ ಬಂದಿದೆ.

ಈ ಕೃತ್ಯಕ್ಕಾಗಿ ಹೇಮಂತ್ ಪೂಜಾರಿ, ಸುರೇಶ್ ಅಮೀನ್‌ನಿಗೆ 5 ಲಕ್ಷ ರೂ. ಕಳುಹಿಸಿದ್ದನು. ಇದರಲ್ಲಿ ಖರ್ಚಾದ ಹಣವನ್ನು ಹೊರತುಪಡಿಸಿ, ಬಾಕಿ ಉಳಿದಿದ್ದ 4.13 ಲಕ್ಷ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಆತನನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಈ ಸುಲಿಗೆ ಜಾಲ ಹಾಗೂ ಸಂಚಿನಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನು ಓದಿ : Mangaluru : ಉಚಿತ ಟಿವಿ ಚಾನೆಲ್ ಜಾಹೀರಾತು — 1.78 ಲಕ್ಷ ರೂ. ವಂಚನೆ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments