Gold ₹1.61 ಲಕ್ಷ ದಾಟಿತು; ಸಚಿವೆ ನಿರ್ಮಲಾ ತಿಳಿಸಿದ ನಿಜವಾದ ಕಾರಣ
ಭಾರತದ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಮಂಗಳವಾರ ಮತ್ತೊಮ್ಮೆ ಏರಿಕೆ ಕಂಡು 24 ಕ್ಯಾರೆಟ್ ಚಿನ್ನ ಹತ್ತು ಗ್ರಾಂಗೆ ₹1,61,780ಕ್ಕೆ ತಲುಪಿದೆ. ಅಮೆರಿಕ-ಇರಾನ್ ಉದ್ವಿಗ್ನತೆ, ಡೊನಾಲ್ಡ್ ಟ್ರಂಪ್ ಅವರ ಸುಂಕ ಬೆದರಿಕೆ ಹಾಗೂ ಜಾಗತಿಕ ಅನಿಶ್ಚಿತತೆ ಈ ಏರಿಕೆಗೆ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
ಫೆಬ್ರವರಿ ತಿಂಗಳ ಬಹುಭಾಗ ₹15,000ದಿಂದ ₹16,000ದ ನಡುವೆ ಏರಿಳಿತ ಕಂಡ ಚಿನ್ನ, ಫೆಬ್ರವರಿ 23 ಸೋಮವಾರ ಈ ತಿಂಗಳಿನಲ್ಲೇ ಮೊದಲ ಬಾರಿಗೆ ₹16 ಸಾವಿರದ ಗಡಿ ದಾಟಿತ್ತು. ಮಂಗಳವಾರ ಗ್ರಾಂಗೆ ₹43 ಹೆಚ್ಚಾಗಿ 24 ಕ್ಯಾರೆಟ್ ₹16,178ಕ್ಕೆ ತಲುಪಿದೆ. 22 ಕ್ಯಾರೆಟ್ ಆಭರಣ ಚಿನ್ನ ಗ್ರಾಂಗೆ ₹40 ಏರಿಕೆಯಾಗಿ ₹14,830ಕ್ಕೆ, 18 ಕ್ಯಾರೆಟ್ ₹33 ಹೆಚ್ಚಾಗಿ ₹12,134ಕ್ಕೆ ನಿಂತಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಮಾತ್ರ ಮಂಗಳವಾರ ಅಲ್ಪ ಕುಸಿತ ಕಂಡುಬಂದಿದೆ.
ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಮಲಾ ಸೀತಾರಾಮನ್, “ಚಿನ್ನದ ಬೆಲೆ ಏರಿಕೆಯಾಗಿದೆ. ಆದರೆ ಇದು ಅನಿಯಂತ್ರಿತ ಮಟ್ಟದಲ್ಲಿಲ್ಲ. ಜಾಗತಿಕ ಭೌಗೋಳಿಕ ರಾಜಕೀಯ ಅನಿಶ್ಚಿತತೆ, ಡಾಲರ್ ಚಂಚಲತೆ ಮತ್ತು ಷೇರು ಮಾರುಕಟ್ಟೆ ಏರಿಳಿತದ ನಡುವೆ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಆಯ್ಕೆಯಾಗಿ ಪರಿಗಣಿಸುತ್ತಿದ್ದಾರೆ. ಸರ್ಕಾರ ಈ ಬೆಲೆ ಏರಿಕೆ ಮೇಲೆ ನಿಕಟ ನಿಗಾ ಇಟ್ಟಿದೆ” ಎಂದರು. ಅಲ್ಲದೆ ವಿಶ್ವದ ಕೇಂದ್ರೀಯ ಬ್ಯಾಂಕ್ಗಳು ಚಿನ್ನ ಸಂಗ್ರಹ ಹೆಚ್ಚಿಸಿರುವುದೂ ದರ ಏರಿಕೆಗೆ ಪ್ರಮುಖ ಕಾರಣ ಎಂದು ಅವರು ವಿವರಿಸಿದ್ದಾರೆ.
ಅಮೆರಿಕ-ಇರಾನ್ ಉದ್ವಿಗ್ನತೆ ಮುಂದುವರಿದಿದ್ದರೂ ಅಮೆರಿಕದಲ್ಲಿ ಡಾಲರ್ ಬಲಿಷ್ಠವಾಗಿರುವ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ-ಬೆಳ್ಳಿ ದರ ಅಷ್ಟಾಗಿ ಚಿಮ್ಮದಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರ ದರ ಏರಿಕೆ ಮುಂದುವರಿದಿದೆ.
ಮಂಗಳೂರಿನಲ್ಲಿ ಚಿನ್ನದ ದರ: ಮಂಗಳವಾರ ಬೆಳಗ್ಗೆ 11 ಗಂಟೆ ವಹಿವಾಟಿನಲ್ಲಿ ಮಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನ ₹16,178 (+43), 22 ಕ್ಯಾರೆಟ್ ₹14,830 (+40) ಮತ್ತು 18 ಕ್ಯಾರೆಟ್ ₹12,134 (+33) ರೂ.ಗೆ ತಲುಪಿದೆ. ದೆಹಲಿಯಲ್ಲಿ 24 ಕ್ಯಾರೆಟ್ ₹16,193 ಮತ್ತು ಚೆನ್ನೈನಲ್ಲಿ ₹16,244 ದಾಖಲಾಗಿದ್ದು ಚೆನ್ನೈ ಅತಿ ಹೆಚ್ಚು ದರ ಹೊಂದಿರುವ ನಗರವಾಗಿದೆ.
ತಜ್ಞರ ಪ್ರಕಾರ, ಟ್ರಂಪ್ ವ್ಯಾಪಾರ ನೀತಿ ಅನಿಶ್ಚಿತತೆ ಮುಂದುವರಿದಷ್ಟೂ ಚಿನ್ನದ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಮದುವೆ ಸೀಸನ್ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಚಿನ್ನ ಖರೀದಿಸಲು ಯೋಜಿಸಿರುವ ಗ್ರಾಹಕರಿಗೆ ಈ ಬೆಲೆ ಏರಿಕೆ ತಲೆನೋವಾಗಿ ಪರಿಣಮಿಸಿದೆ.

