ನವದೆಹಲಿ : ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಜಾಗತಿಕವಾಗಿ ತಲೆದೂರಿರುವ ತೀವ್ರ ಇಂಧನ ಬಿಕ್ಕಟ್ಟನ್ನು ಎದುರಿಸಲು ಭಾರತ ಸರ್ಕಾರವು ಲಭ್ಯವಿರುವ ಎಲ್ಲಾ ಸಂಭಾವ್ಯ ಮೂಲಗಳಿಂದ ಅನಿಲ ಮತ್ತು ಕಚ್ಚಾ ತೈಲವನ್ನು ಪಡೆಯಲು ಶ್ರಮಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಇಂಧನ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು, ದೇಶದ ಇಂಧನ ಭದ್ರತೆಯನ್ನು ಕಾಪಾಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.
ಭಾರತವು ಕಳೆದ 11 ವರ್ಷಗಳಲ್ಲಿ ಇಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸಲು 53 ಲಕ್ಷ ಮೆಟ್ರಿಕ್ ಟನ್ (MT) ಸಾಮರ್ಥ್ಯದ ‘ಕಾರ್ಯತಂತ್ರದ ತೈಲ ಸಂಗ್ರಹಾಗಾರಗಳನ್ನು’ (Strategic Oil Reserves) ಯಶಸ್ವಿಯಾಗಿ ನಿರ್ಮಿಸಿದೆ. ಅಷ್ಟೇ ಅಲ್ಲದೆ, ಹೆಚ್ಚುವರಿಯಾಗಿ 65 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಸಂಗ್ರಹಾಗಾರಗಳ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಈ ಸಂಗ್ರಹಾಗಾರಗಳು ಯುದ್ಧದಂತಹ ಸಮಯದಲ್ಲಿ ದೇಶಕ್ಕೆ ಅಗತ್ಯವಿರುವ ತೈಲ ಪೂರೈಕೆಯನ್ನು ಖಾತರಿಪಡಿಸುತ್ತವೆ.
ಮಧ್ಯಪ್ರಾಚ್ಯದ ಬಿಕ್ಕಟ್ಟು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಶಾಂತಿಯುತವಾಗಿ ಬಗೆಹರಿಯಲಿ ಎಂಬುದು ಭಾರತದ ಸ್ಪಷ್ಟ ನಿಲುವಾಗಿದೆ. ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಕ್ತಗೊಳಿಸುವುದು ಮತ್ತು ಯುದ್ಧದ ತೀವ್ರತೆಯನ್ನು ತಗ್ಗಿಸುವುದು ಭಾರತದ ಮುಖ್ಯ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಒಂದು ವೇಳೆ ಈ ಬಿಕ್ಕಟ್ಟು ದೀರ್ಘಕಾಲ ಮುಂದುವರಿದರೆ ಜಾಗತಿಕ ಆರ್ಥಿಕತೆಯ ಮೇಲೆ ಭೀಕರ ಪರಿಣಾಮಗಳು ಉಂಟಾಗಲಿವೆ ಎಂದು ಮೋದಿ ಎಚ್ಚರಿಸಿದ್ದಾರೆ.
ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ದೀರ್ಘಕಾಲದ ಸ್ವಾವಲಂಬನೆ ಸಾಧಿಸಲು ಸರ್ಕಾರವು 70,000 ಕೋಟಿ ರೂಪಾಯಿಗಳ ಬೃಹತ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಇಂಧನ ಸಾಗಣೆಗೆ ಪೂರಕವಾಗಿ ಹಡಗುಗಳ ತಯಾರಿಕೆಗೆ ಒತ್ತು ನೀಡಲಾಗುತ್ತಿದೆ. ಭಾರತವು ಇಂಧನಕ್ಕಾಗಿ ಕೇವಲ ಒಂದು ಪ್ರದೇಶವನ್ನು ಅವಲಂಬಿಸದೆ, ತನ್ನ ಮೂಲಗಳನ್ನು ವೈವಿಧ್ಯಗೊಳಿಸುವ ಮೂಲಕ ದೇಶದ ಜನರಿಗೆ ಹೊರೆಯಾಗದಂತೆ ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ಭರವಸೆ ನೀಡಿದರು.

