ಕೊಲ್ಕತ್ತಾ : ಖ್ಯಾತ ನಟ ರಾಹುಲ್ ಬ್ಯಾನರ್ಜಿ ಅವರು ‘ಭೋಲ್ ಬಾಬಾ ಪಾರ್ ಕರೇಗಾ’ ಎಂಬ ಹೊಸ ಬಂಗಾಳಿ ಧಾರಾವಾಹಿಯ ಚಿತ್ರೀಕರಣಕ್ಕಾಗಿ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಗಡಿಯಲ್ಲಿರುವ ‘ತಲ್ಸರಿ’ ಎಂಬ ಸಮುದ್ರ ತೀರಕ್ಕೆ ತೆರಳಿದ್ದರು. ಭಾನುವಾರ ಬೆಳಿಗ್ಗೆ ಚಿತ್ರೀಕರಣದ ಕೆಲಸಗಳು ಅಚ್ಚುಕಟ್ಟಾಗಿ ನಡೆದಿದ್ದವು. ಮಧ್ಯಾಹ್ನದ ವೇಳೆಗೆ ಆ ದಿನದ ಶೂಟಿಂಗ್ ಮುಗಿಸಿ ಚಿತ್ರತಂಡ ‘ಪ್ಯಾಕಪ್’ ಘೋಷಿಸಿತ್ತು.
ಕೆಲಸ ಮುಗಿದ ನಂತರ ನಟ ರಾಹುಲ್ ಅವರು ಏಕಾಂಗಿಯಾಗಿ ಸಮುದ್ರಕ್ಕೆ ಇಳಿದಿದ್ದರು ಎಂದು ತಿಳಿದುಬಂದಿದೆ. ಅವರು ಆಳವಾದ ನೀರಿಗೆ ಹೋದಾಗ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ನೀರಿನಲ್ಲಿ ಮುಳುಗಿದ್ದಾರೆ. ನಟ ಕಾಣೆಯಾದ ತಕ್ಷಣ ಚಿತ್ರತಂಡದಲ್ಲಿ ಆತಂಕ ಶುರುವಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ತಾಂತ್ರಿಕ ಸಿಬ್ಬಂದಿ ಮತ್ತು ಇತರರು ಅವರನ್ನು ಹುಡುಕಿ ನೀರಿನಿಂದ ಹೊರಗೆಳೆಯುವಲ್ಲಿ ಯಶಸ್ವಿಯಾದರು.
ನೀರನ್ನು ಕುಡಿದು ಪ್ರಜ್ಞಾಹೀನರಾಗಿದ್ದ ಅವರನ್ನು ಕೂಡಲೇ ಸಮೀಪದ ದಿಘಾ ಉಪವಿಭಾಗೀಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 6:10ರ ಸುಮಾರಿಗೆ ಅವರು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದರು. 43 ವರ್ಷದ ಈ ಪ್ರತಿಭಾವಂತ ನಟನ ಅಕಾಲಿಕ ಸಾವು ಇಡೀ ಬಂಗಾಳಿ ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ.
ರಾಹುಲ್ ಬ್ಯಾನರ್ಜಿ ಅವರು ಪತ್ನಿ ಪ್ರಿಯಾಂಕಾ ಸರ್ಕಾರ್ (ಪ್ರಸಿದ್ಧ ನಟಿ) ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ. ಈ ಕರಾಳ ಸುದ್ದಿಯನ್ನು ಪತ್ನಿ ಪ್ರಿಯಾಂಕಾ ಅವರು ಸಾಮಾಜಿಕ ಜಾಲತಾಣದ ಮೂಲಕ ಖಚಿತಪಡಿಸಿದ್ದು, ಈ ಕಠಿಣ ಸಮಯದಲ್ಲಿ ತಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸಬೇಕೆಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

