Friday, April 3, 2026
Homeತಾಜಾ ಸುದ್ದಿSarah Mullally : ಕ್ಯಾಂಟರ್ಬರಿಯ ಮೊದಲ ಮಹಿಳಾ ಆರ್ಚ್ಬಿಷಪ್ ಆಗಿ ಸಾರಾ ಮುಲ್ಲಲ್ಲಿ ಸಿಂಹಾಸನಾರೋಹಣ

Sarah Mullally : ಕ್ಯಾಂಟರ್ಬರಿಯ ಮೊದಲ ಮಹಿಳಾ ಆರ್ಚ್ಬಿಷಪ್ ಆಗಿ ಸಾರಾ ಮುಲ್ಲಲ್ಲಿ ಸಿಂಹಾಸನಾರೋಹಣ

ಕ್ಯಾಂಟರ್ಬರಿ :  ಬ್ರಿಟನ್‌ನ ಚರ್ಚ್ ಆಫ್ ಇಂಗ್ಲೆಂಡ್‌ನ 1,400 ವರ್ಷಗಳ ಇತಿಹಾಸದಲ್ಲಿ ಬುಧವಾರ ಹೊಸ ದಾಖಲೆ ನಿರ್ಮಾಣವಾಗಿದೆ. ಡೇಮ್ ಸಾರಾ ಮುಲ್ಲಲ್ಲಿ (Sarah Mullally) ಅವರು ಮೊದಲ ಮಹಿಳಾ ಆರ್ಚ್‌ಬಿಷಪ್ ಆಗಿ ಕ್ಯಾಂಟರ್ಬರಿ ಕ್ಯಾಥೆಡ್ರಲ್‌ನಲ್ಲಿ ಅದ್ಧೂರಿಯಾಗಿ ಪಟ್ಟಾಭಿಷೇಕಗೊಂಡಿದ್ದಾರೆ. ಈ ಮೂಲಕ ವಿಶ್ವದಾದ್ಯಂತ ಸುಮಾರು 8.5 ಕೋಟಿ ಸದಸ್ಯರನ್ನು ಹೊಂದಿರುವ ಆಂಗ್ಲಿಕನ್ ಕಮ್ಯುನಿಯನ್‌ನ ಆಧ್ಯಾತ್ಮಿಕ ಮುಖ್ಯಸ್ಥರಾಗಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಐತಿಹಾಸಿಕ ಸಮಾರಂಭಕ್ಕೆ ಬ್ರಿಟನ್ ರಾಜಮನೆತನದ ಪ್ರಿನ್ಸ್ ವಿಲಿಯಂ, ಕೇಟ್ ಮಿಡಲ್ಟನ್ ಮತ್ತು ಪ್ರಧಾನಿ ಕೀರ್ ಸ್ಟಾರ್ಮರ್ ಸೇರಿದಂತೆ ಸುಮಾರು 2,000 ಗಣ್ಯರು ಸಾಕ್ಷಿಯಾದರು.

63 ವರ್ಷದ ಸಾರಾ ಮುಲ್ಲಲ್ಲಿ ಅವರು ಆರ್ಚ್‌ಬಿಷಪ್ ಆಗುವ ಮೊದಲು ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ (NHS) ಶುಶ್ರೂಷಕಿಯಾಗಿ (Nurse) ಸುದೀರ್ಘ ಸೇವೆ ಸಲ್ಲಿಸಿದ್ದರು. ಅವರು ತಮ್ಮ ಪಟ್ಟಾಭಿಷೇಕದ ವೇಳೆ ಧರಿಸಿದ್ದ ಉಡುಪಿನ ಕ್ಲಾಸ್ಪ್ (Clasp) ಅನ್ನು ತಾವು ನರ್ಸ್ ಆಗಿದ್ದಾಗ ಧರಿಸುತ್ತಿದ್ದ ಬೆಲ್ಟ್ ಮಾದರಿಯಲ್ಲೇ ವಿನ್ಯಾಸಗೊಳಿಸಿದ್ದು ವಿಶೇಷವಾಗಿತ್ತು. ಚರ್ಚ್‌ನಲ್ಲಿ ನಡೆದ ಹಳೆಯ ಲೈಂಗಿಕ ದೌರ್ಜನ್ಯ ಹಗರಣವೊಂದನ್ನು ಮರೆಮಾಚಿದ ಆರೋಪದ ಮೇಲೆ ಅವರ ಪೂರ್ವಾಧಿಕಾರಿ ಜಸ್ಟೀನ್ ವೆಲ್ಬಿ ಅವರು 2024ರಲ್ಲಿ ರಾಜಿನಾಮೆ ನೀಡಿದ್ದರು. ಆ ಕಳಂಕವನ್ನು ತೊಳೆದು ಚರ್ಚ್ ಅನ್ನು ಸತ್ಯ ಮತ್ತು ನ್ಯಾಯದ ಹಾದಿಯಲ್ಲಿ ಮುನ್ನಡೆಸುವ ಹೊಣೆಗಾರಿಕೆ ಈಗ ಸಾರಾ ಅವರ ಮೇಲಿದೆ.

ಅಧಿಕಾರ ಸ್ವೀಕರಿಸಿದ ನಂತರ ತಮ್ಮ ಚೊಚ್ಚಲ ಧರ್ಮೋಪದೇಶ ನೀಡಿದ ಸಾರಾ, ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ಯುದ್ಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ವಿಶೇಷವಾಗಿ ಮಧ್ಯಪ್ರಾಚ್ಯ, ಉಕ್ರೇನ್, ಸುಡಾನ್ ಮತ್ತು ಮ್ಯಾನ್ಮಾರ್‌ನಂತಹ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಚರ್ಚ್‌ನ ಹಳೆಯ ವೈಫಲ್ಯಗಳನ್ನು ಮುಕ್ತವಾಗಿ ಒಪ್ಪಿಕೊಂಡ ಅವರು, ಇನ್ನು ಮುಂದೆ ಕರುಣೆ ಮತ್ತು ಮಾನವೀಯತೆಯ ಆಧಾರದ ಮೇಲೆ ಆಧ್ಯಾತ್ಮಿಕ ಸೇವೆಯನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು.

ಆದರೆ, ಸಾರಾ ಅವರ ಈ ನೇಮಕವು ಎಲ್ಲರಿಂದಲೂ ಸುಲಭವಾಗಿ ಸ್ವೀಕರಿಸಲ್ಪಟ್ಟಿಲ್ಲ. ಮಹಿಳೆಯರ ನೇತೃತ್ವ ಮತ್ತು ಸಮಲಿಂಗಿ ವಿವಾಹಗಳಂತಹ ಪ್ರಗತಿಪರ ವಿಚಾರಗಳನ್ನು ವಿರೋಧಿಸುವ ಆಫ್ರಿಕಾ ಮತ್ತು ಏಷ್ಯಾದ ಕೆಲವು ಸಾಂಪ್ರದಾಯಿಕ ಚರ್ಚ್‌ಗಳು ಇವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ. ಚರ್ಚ್‌ನಲ್ಲಿರುವ ಈ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ, ವಿವಿಧ ಸಂಸ್ಕೃತಿಯ ಜನರನ್ನು ಒಗ್ಗಟ್ಟಾಗಿ ಮುನ್ನಡೆಸುವುದು ಸಾರಾ ಮುಲ್ಲಲ್ಲಿ ಅವರ ಮುಂದಿರುವ ಅತ್ಯಂತ ದೊಡ್ಡ ಸವಾಲಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!