ಬಾಗ್ದಾದ್, ಇರಾಕ್ : ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಅಮೆರಿಕಾದ ಖ್ಯಾತ ಪತ್ರಕರ್ತೆ ಶೆಲ್ಲಿ ಕಿಟಲ್ಸನ್ (Shelly Kittleson) ಅವರನ್ನು ಅಪಹರಿಸಲಾಗಿದ್ದು, ಈ ಘಟನೆ ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿದೆ. ಮಂಗಳವಾರ ಸಂಜೆ ಬಾಗ್ದಾದ್‌ನ ಜನನಿಬಿಡ ರಸ್ತೆಯೊಂದರಲ್ಲಿ ಶೆಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಸಶಸ್ತ್ರಧಾರಿಗಳು ಅಡ್ಡಗಟ್ಟಿದ್ದಾರೆ. ಪ್ರಶಸ್ತಿ ವಿಜೇತ ಫ್ರೀಲಾನ್ಸ್ ಪತ್ರಕರ್ತೆಯಾಗಿರುವ ಶೆಲ್ಲಿ ಅವರನ್ನು ಬಲವಂತವಾಗಿ ಕಾರಿನಿಂದ ಎಳೆದು ಅಪಹರಿಸಲಾಗಿದ್ದು, ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿ ಭಾರಿ ವೈರಲ್ ಆಗಿವೆ.
ಅಪಹರಣದ ಸುದ್ದಿ ತಿಳಿಯುತ್ತಿದ್ದಂತೆಯೇ ಇರಾಕ್ ಭದ್ರತಾ ಪಡೆಗಳು ಕಿಡ್ನಾಪರ್‌ಗಳನ್ನು ಬೆನ್ನಟ್ಟಿದ್ದು, ಈ ವೇಳೆ ಭೀಕರ ಚೇಸಿಂಗ್ ನಡೆದಿದೆ. ಪೊಲೀಸರು ಬೆನ್ನಟ್ಟುವ ಬರದಲ್ಲಿ ಕಿಡ್ನಾಪರ್‌ಗಳ ಒಂದು ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ದುರದೃಷ್ಟವಶಾತ್ ಕಿಡ್ನಾಪರ್‌ಗಳ ಮತ್ತೊಂದು ಗುಂಪು ಶೆಲ್ಲಿ ಅವರನ್ನು ಎರಡನೇ ಕಾರಿನಲ್ಲಿ ಕೂರಿಸಿಕೊಂಡು ದಕ್ಷಿಣ ಬಾಗ್ದಾದ್‌ನತ್ತ ಪರಾರಿಯಾಗುವಲ್ಲಿ ಯಶಸ್ವಿಯಾಗಿದೆ.
ವರದಿಗಳ ಪ್ರಕಾರ, ಅಮೆರಿಕಾ ಸರ್ಕಾರವು ಶೆಲ್ಲಿ ಅವರಿಗೆ ಇರಾಕ್‌ಗೆ ಪ್ರಯಾಣಿಸದಂತೆ ಮೊದಲೇ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿತ್ತು. ಇತ್ತೀಚಿನ ಯುದ್ಧದ ವಾತಾವರಣದ ಹಿನ್ನೆಲೆಯಲ್ಲಿ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳು ಅಮೆರಿಕಾ ನಾಗರಿಕರನ್ನು ಗುರಿಯಾಗಿಸುತ್ತಿರುವ ಶಂಕೆ ಇತ್ತು. ಈ ಹಿಂದೆಯೂ ಇಂತಹ ಕಿಡ್ನಾಪ್ ಪ್ರಕರಣಗಳು ನಡೆದಿದ್ದು, ಶೆಲ್ಲಿ ಅವರ ಸುರಕ್ಷತೆಗಾಗಿ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

