ತೆಲಂಗಾಣ : ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ಹಠ ಹಿಡಿದು ಮೊಬೈಲ್ ಟವರ್ ಏರಿ ಕುಳಿತ ಭೀಕರ ಹೈಡ್ರಾಮಾ ನಡೆದಿದೆ. ಮೌನಿಕಾ ಎಂಬ ಯುವತಿ ಅಜಯ್ ಎಂಬ ಯುವಕನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಆದರೆ ಇವರ ಮದುವೆಗೆ ಮನೆಯವರು ಬಲವಾದ ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದ ಯುವತಿ ಈ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದಾಳೆ.
ಮದುವೆ ಮಾಡಿಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಮೌನಿಕಾ, ಸುಮಾರು ಎರಡು ಗಂಟೆಗಳ ಕಾಲ ಟವರ್‌ನ ತುತ್ತತುದಿಯಲ್ಲಿ ಕುಳಿತು ಎಲ್ಲರನ್ನೂ ಆತಂಕಕ್ಕೆ ತಳ್ಳಿದ್ದಳು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಸ್ಥಳೀಯರು ಯುವತಿಯನ್ನು ಕೆಳಗಿಳಿಸಲು ಹರಸಾಹಸ ಪಟ್ಟಿದ್ದಾರೆ. ನೂರಾರು ಜನರು ಜಮಾಯಿಸಿ ಈ ರೋಚಕ ದೃಶ್ಯವನ್ನು ನೋಡುತ್ತಿದ್ದರು.
ಕೊನೆಗೂ ಪೊಲೀಸರು ಮತ್ತು ಸ್ಥಳೀಯರು ಅತ್ಯಂತ ಜಾಣ್ಮೆಯಿಂದ ಯುವತಿಯ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನಡೆದ ಹೈ ಟೆನ್ಷನ್ ಡ್ರಾಮಾದ ನಂತರ ಯುವತಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು. ಸದ್ಯ ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪ್ರೀತಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಯುವತಿಯ ಸಾಹಸ ಕಂಡು ಜನ ಬೆಚ್ಚಿಬಿದ್ದಿದ್ದಾರೆ.

