Thursday, April 2, 2026
Homeಆರೋಗ್ಯVijayapura : ಅತ್ತೆಯಲ್ಲ, ಜೀವದಾತೆ — ಸೊಸೆಯಂದಿರಿಗೆ ಕಿಡ್ನಿ ದಾನ ಮಾಡಿ ಮಾದರಿಯಾದ ವಿಜಯಪುರದ ನೀಲಮ್ಮ-ಶಾಂತಾಬಾಯಿ

Vijayapura : ಅತ್ತೆಯಲ್ಲ, ಜೀವದಾತೆ — ಸೊಸೆಯಂದಿರಿಗೆ ಕಿಡ್ನಿ ದಾನ ಮಾಡಿ ಮಾದರಿಯಾದ ವಿಜಯಪುರದ ನೀಲಮ್ಮ-ಶಾಂತಾಬಾಯಿ

Vijayapura: ಅತ್ತೆ-ಸೊಸೆ ಪ್ರೀತಿಗೆ ಹೊಸ ವ್ಯಾಖ್ಯಾನ: ಕಿಡ್ನಿ ದಾನದಿಂದ ಜೀವ ಉಳಿಸಿದ ನೀಲಮ್ಮ ಮತ್ತು ಶಾಂತಾಬಾಯಿ

ಬೆಂಗಳೂರು, : ಅತ್ತೆ-ಸೊಸೆ ಎಂದ ಕೂಡಲೇ ಜಗಳ ಮತ್ತು ದೂರು-ದುಮ್ಮಾನ ಮಾಮೂಲಿ ಎನ್ನುವ ಸಮಾಜಕ್ಕೆ ವಿಜಯಪುರ ನಗರದ ಇಬ್ಬರು ಅತ್ತೆಯಂದಿರು ಅಪರೂಪದ ಉತ್ತರ ನೀಡಿದ್ದಾರೆ. ನೀಲಮ್ಮ ಮತ್ತು ಶಾಂತಾಬಾಯಿ ಎಂಬ ಈ ಮಹಾದಾನಿಗಳು ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಸೊಸೆಯಂದಿರಿಗೆ ತಮ್ಮ ಕಿಡ್ನಿ ದಾನ ಮಾಡಿ ಹೊಸ ಜೀವನ ನೀಡಿದ್ದಾರೆ. ವಿಜಯಪುರ ಭೂತನಾಳ ಸಮೀಪದ ಯಶೋದಾ ಆಸ್ಪತ್ರೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನಡೆದಿವೆ.

ಮೊದಲ ಪ್ರಕರಣದಲ್ಲಿ ಅತ್ತೆ ನೀಲಮ್ಮ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸೊಸೆ ಪ್ರಭಾವತಿಗೆ ತಮ್ಮ ಕಿಡ್ನಿ ದಾನ ಮಾಡಿ ಜೀವದಾನ ಮಾಡಿದ್ದಾರೆ. ಎರಡನೇ ಪ್ರಕರಣದಲ್ಲಿ ಶಾಂತಾಬಾಯಿ ಅವರು ತಮ್ಮ ಸೊಸೆಗೆ ಕಿಡ್ನಿ ದಾನ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಎರಡೂ ಸೊಸೆಯಂದಿರು ಮತ್ತು ಅತ್ತೆಯಂದಿರು ಈಗ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ. ಈ ಮಹಾದಾನಿಗಳಿಗೆ ಆಸ್ಪತ್ರೆ ವತಿಯಿಂದ ವಿಶೇಷ ಸನ್ಮಾನ ನಡೆಸಲಾಗಿದೆ.

ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅತ್ತೆ ನೀಲಮ್ಮ, “ಕಿಡ್ನಿ ಕೊಡಲು ಆರಂಭದಲ್ಲಿ ಆತಂಕ ಇತ್ತು. ಆದರೆ ಎರಡು ಕಿಡ್ನಿಗಳ ಪೈಕಿ ಒಂದನ್ನು ದಾನ ಮಾಡಬಹುದು ಎಂದು ವೈದ್ಯರು ತಿಳಿಸಿದರು. ಸೊಸೆಯ ಆರೋಗ್ಯ ನನಗೆ ಮುಖ್ಯವಾಗಿತ್ತು. ಹೀಗಾಗಿ ಗಟ್ಟಿ ನಿರ್ಧಾರ ಮಾಡಿದೆ. ಈಗ ನಾನೂ ಆರೋಗ್ಯವಾಗಿದ್ದೇನೆ” ಎಂದು ಭಾವಪೂರ್ವಕವಾಗಿ ಹೇಳಿದರು.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದ್ದು, ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅಭಿನಂದನೆ ತಿಳಿಸಿದ್ದಾರೆ. “ಸಾಮಾನ್ಯವಾಗಿ ಕಿಡ್ನಿ ದಾನದ ವಿಷಯ ಬಂದಾಗ ಹಲವರು ಹಿಂದೆ ಸರಿಯುತ್ತಾರೆ. ಆದರೆ ಇಬ್ಬರು ಅತ್ತೆಯಂದಿರು ಸೊಸೆಯಂದಿರನ್ನು ಸ್ವಂತ ಹೆಣ್ಣುಮಕ್ಕಳಂತೆ ಕಂಡು ಕಿಡ್ನಿ ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ದಾನಿಗಳಾದ ನೀಲಮ್ಮ ಮತ್ತು ಶಾಂತಾಬಾಯಿ ಅವರಿಗೆ ಗೌರವಪೂರ್ವಕ ಅಭಿನಂದನೆಗಳು” ಎಂದು ಸಚಿವರು ಹೇಳಿದ್ದಾರೆ.

ಕಿಡ್ನಿ ಕಾಯಿಲೆ ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಅಂಗಾಂಗ ದಾನಕ್ಕಾಗಿ ಕಾಯುತ್ತಿರುವ ರೋಗಿಗಳ ಸಂಖ್ಯೆ ಲಕ್ಷಗಳಲ್ಲಿದೆ. ಇಂಥ ಸಂದರ್ಭದಲ್ಲಿ ನೀಲಮ್ಮ ಮತ್ತು ಶಾಂತಾಬಾಯಿ ಅವರ ತ್ಯಾಗ ಅಂಗಾಂಗ ದಾನ ಜಾಗೃತಿ ಮೂಡಿಸಲು ಸ್ಫೂರ್ತಿಯ ಸೆಲೆಯಾಗಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!