Homeತಾಜಾ ಸುದ್ದಿBJP vs Cockroach Janta Party : ಐದೇ ದಿನಗಳಲ್ಲಿ 1.2 ಕೋಟಿ ಫಾಲೋವರ್ಸ್; ಇನ್‌ಸ್ಟಾಗ್ರಾಮ್‌ನಲ್ಲಿ...

BJP vs Cockroach Janta Party : ಐದೇ ದಿನಗಳಲ್ಲಿ 1.2 ಕೋಟಿ ಫಾಲೋವರ್ಸ್; ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಯನ್ನೇ ಧೂಳೀಪಟ ಮಾಡಿದ ‘ಕಾಕ್ರೋಚ್ ಜನತಾ ಪಕ್ಷ’!

ನವದೆಹಲಿ : ಹೊಸದಿಲ್ಲಿಯಲ್ಲಿ ಭಾರಿ ಸಂಚಲನ ಮೂಡಿಸಿರುವ ಈ ಆನ್‌ಲೈನ್ ಅಭಿಯಾನವು ಮೇ 21ರ ವೇಳೆಗೆ ಬರೋಬ್ಬರಿ 12 ಮಿಲಿಯನ್ (1.2 ಕೋಟಿ) ಫಾಲೋವರ್ಸ್ ಗಡಿಯನ್ನು ದಾಟಿದೆ. ಇದಕ್ಕೆ ಹೋಲಿಸಿದರೆ, ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿಯ ಅಧಿಕೃತ ಖಾತೆ (@bjp4india) ಕೇವಲ 8.7 ಮಿಲಿಯನ್ ಫಾಲೋವರ್ಸ್ ಹೊಂದಿದೆ. ಇನ್ನುಳಿದಂತೆ ಕಾಂಗ್ರೆಸ್‌ನ (@incindia) ಖಾತೆ 13.2 ಮಿಲಿಯನ್ ಹಾಗೂ ಆಮ್ ಆದ್ಮಿ ಪಕ್ಷದ ಖಾತೆ 1.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಸದ್ಯ ಈ ಕಾಕ್ರೋಚ್ ಜನತಾ ಪಕ್ಷವು ಇನ್‌ಸ್ಟಾಗ್ರಾಮ್‌ನಲ್ಲಿ ನೇರವಾಗಿ ಕಾಂಗ್ರೆಸ್ ಖಾತೆಗೆ ಪೈಪೋಟಿ ನೀಡುವ ಹಂತಕ್ಕೆ ಬೆಳೆದಿದೆ.

ಈ ಅಭಿಯಾನದ ಹಿನ್ನೆಲೆ ನೋಡುವುದಾದರೆ, ಇತ್ತೀಚೆಗೆ ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಮಾಡಿದ್ದ ಕೆಲವು ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ, ದೇಶದ ಯುವಜನರು ನಡೆಸುತ್ತಿರುವ ವಿಡಂಬನಾತ್ಮಕ ಚಳವಳಿಯಾಗಿ ಇದು ಮೇ 16ರಂದು ಮೊದಲು ಎಕ್ಸ್ (ಟ್ವಿಟರ್) ವೇದಿಕೆಯಲ್ಲಿ ಕಾಣಿಸಿಕೊಂಡಿತ್ತು. ಕೇವಲ ಒಂದು ದಿನದ ಬಳಿಕ ಇದರ ಇನ್‌ಸ್ಟಾಗ್ರಾಮ್ ಖಾತೆಯನ್ನು (@cockroachjantaparty) ಆರಂಭಿಸಲಾಯಿತು. ‘ಯುವಕರಿಂದ, ಯುವಕರಿಗಾಗಿ, ಯುವಕರ ರಾಜಕೀಯ ವೇದಿಕೆ’ ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಈ ಖಾತೆಯು ದೇಶದ ನಿರುದ್ಯೋಗ, ರಾಜಕೀಯ ಹೊಣೆಗಾರಿಕೆ ಮತ್ತು ಪ್ರಮುಖವಾಗಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಗಳಂತಹ ಗಂಭೀರ ವಿಚಾರಗಳನ್ನು ವ್ಯಂಗ್ಯದ ರೂಪದಲ್ಲಿ ಪ್ರಸ್ತಾಪಿಸುತ್ತಿದೆ. ಇದು ದೇಶದ ಕಿರು ವಯಸ್ಸಿನ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಭಾರಿ ಪ್ರತಿಧ್ವನಿ ಮೂಡಿಸಿದೆ.

ಈ ಖಾತೆಯ ಬೆಳವಣಿಗೆ ಎಷ್ಟು ಸ್ಫೋಟಕವಾಗಿದೆಯೆಂದರೆ, ಆರಂಭವಾದ ಕೇವಲ 78 ಗಂಟೆಗಳಲ್ಲಿ 3 ಮಿಲಿಯನ್ ಫಾಲೋವರ್ಸ್ ದಾಟಿ, ಐದೇ ದಿನಗಳಲ್ಲಿ 12 ಮಿಲಿಯನ್ ಗಡಿ ತಲುಪಿದೆ. ಆಶ್ಚರ್ಯದ ಸಂಗತಿಯೆಂದರೆ, ಬಿಜೆಪಿ ಇದುವರೆಗೆ ತನ್ನ ಪೇಜ್‌ನಲ್ಲಿ 18,000ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಪ್ರಕಟಿಸಿದ್ದರೆ, ಈ ಕಾಕ್ರೋಚ್ ಜನತಾ ಪಕ್ಷವು ಕೇವಲ 56 ಪೋಸ್ಟ್‌ಗಳನ್ನು ಹಂಚಿಕೊಂಡು ಈ ಮೈಲಿಗಲ್ಲು ನೆಟ್ಟಿದೆ! ಬಿಜೆಪಿಯನ್ನು ಹಿಂದಿಕ್ಕಿದ ಬಳಿಕ ಸಂಭ್ರಮ ವ್ಯಕ್ತಪಡಿಸಿರುವ ಈ ಪೇಜ್, “ಯುವಕರ ಶಕ್ತಿಯನ್ನು ಕಡಿಮೆ ಅಂದಾಜು ಮಾಡಬೇಡಿ” ಎಂದು ಪೋಸ್ಟ್ ಮಾಡಿದೆ. ಮತ್ತೊಂದು ಪೋಸ್ಟ್‌ನಲ್ಲಿ “ವಿಶ್ವದ ಅತಿ ದೊಡ್ಡ ಪಕ್ಷ ಎಂದು ಅವರು ಹೇಳಿದ್ದರು” ಎಂದು ಬರೆದು ಬಿಜೆಪಿಯ ಸಂಘಟನಾ ಬಲವನ್ನು ತೀವ್ರವಾಗಿ ವ್ಯಂಗ್ಯವಾಡಿದೆ. ತಮಾಷೆಯ ರೂಪದಲ್ಲಿ ಆರಂಭವಾದ ಈ ಚಳವಳಿಯ ಎಕ್ಸ್ (X) ಖಾತೆಯೂ ಸಹ ಮೇ 21ರ ವೇಳೆಗೆ 1.65 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಪಡೆದುಕೊಂಡಿದೆ.

ಇದನ್ನು ಓದಿ : Belthangady : ಉಪ್ಪಿನಂಗಡಿ ಸೂರ್ಯ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಗೇರುಕಟ್ಟೆಯ ವ್ಯಾಪಾರಿ ಮುಹಮ್ಮದ್ ಶರೀಫ್ ಬಲಿ!

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments