ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ಬಳಕೆಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. 21 ವರ್ಷದೊಳಗಿನ ಯುವಕರಿಗೆ ಸಿಗರೇಟ್ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಕೆ. ಸ್ಪಷ್ಟಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ತಂಬಾಕು ನಿಯಂತ್ರಣ ಕೋಶದ ಸಮನ್ವಯ ಸಮಿತಿ ಸಭೆಯಲ್ಲಿ ಈ ಮಹತ್ವದ ಸೂಚನೆಗಳನ್ನು ನೀಡಲಾಗಿದೆ:
- 21 ವರ್ಷದ ನಿಯಮ: 2024ರ ತಿದ್ದುಪಡಿ ಕಾಯ್ದೆಯ ಅನ್ವಯ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಮಾರುವಂತಿಲ್ಲ. ಅಂಗಡಿಗಳಲ್ಲಿ ತಂಬಾಕು ಮಾರಾಟ ಮಾಡುವ ವ್ಯಕ್ತಿಗೂ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು.
- ಸಿಂಗಲ್ ಸಿಗರೇಟ್ ಬ್ಯಾನ್: ಸಿಗರೇಟ್ಗಳನ್ನು ಬಿಡಿ (ಸಿಂಗಲ್) ಆಗಿ ಮಾರುವಂತಿಲ್ಲ, ಇಡೀ ಪ್ಯಾಕೆಟ್ ರೂಪದಲ್ಲೇ ಮಾರಬೇಕು. ಗ್ರಾಹಕರಿಗೆ ಬಳಸಲು ಬೆಂಕಿಪೆಟ್ಟಿಗೆ ಅಥವಾ ಲೈಟರ್ ಇಡುವ ಅಂಗಡಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
- ಶಾಲಾ ವ್ಯಾಪ್ತಿ ಮತ್ತು ಬ್ಯಾಗ್ ತಪಾಸಣೆ: ಶಾಲಾ-ಕಾಲೇಜುಗಳ 100 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ತಂಬಾಕು ಮಾರಾಟಕ್ಕೆ ಅವಕಾಶವಿಲ್ಲ. ಕಾಲೇಜು ಮತ್ತು ಶಾಲೆಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್ಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು ಹಾಗೂ ಪ್ರತಿ ತಿಂಗಳು ‘ತಂಬಾಕು ಮುಕ್ತ ಶಾಲೆ’ ಎಂದು ದೃಢೀಕರಣ ನೀಡಬೇಕು.
- ಲೈಸನ್ಸ್ ರದ್ದು ಮತ್ತು ₹1,000 ದಂಡ: ನಿಯಮ ಉಲ್ಲಂಘಿಸಿ ಅಪ್ರಾಪ್ತರಿಗೆ ಸಿಗರೇಟ್ ಮಾರಾಟ ಮಾಡುವ ಅಂಗಡಿ, ಕೆಫೆ ಮತ್ತು ಹೋಟೆಲ್ಗಳ ಪರವಾನಗಿ (ಲೈಸನ್ಸ್) ರದ್ದುಗೊಳಿಸಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಅಥವಾ ತಂಬಾಕು ತಿಂದು ಉಗಿಯುವುದು ಕಂಡುಬಂದರೆ ಸ್ಥಳದಲ್ಲೇ ₹1,000 ದಂಡ ವಿಧಿಸಲಾಗುತ್ತದೆ.
ಪೊಲೀಸ್, ಆರೋಗ್ಯ ಮತ್ತು ಸ್ಥಳೀಯ ಸಂಸ್ಥೆಗಳ ಜಂಟಿ ತಂಡಗಳು ಜಿಲ್ಲಾದ್ಯಂತ ನಿರಂತರ ದಾಳಿ ಮತ್ತು ತಪಾಸಣೆ ನಡೆಸಲಿವೆ.
ಇದನ್ನು ಓದಿ : Mangaluru : ನ್ಯಾಯಾಲಯಕ್ಕೆ ಹಾಜರಾಗದೆ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್!