ಕುಂದಾಪುರ : ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ವೊಂದು ನೀರಿನ ಪ್ರಬಲ ಸೆಳೆತಕ್ಕೆ ಸಿಲುಕಿ ಗಂಗೊಳ್ಳಿ ಅಳಿವೆಯಲ್ಲಿ ಮುಳುಗಡೆಯಾದ ಘಟನೆ ಬುಧವಾರ ನಡೆದಿದೆ. ಬೋಟ್ನಲ್ಲಿದ್ದ ಆರು ಮಂದಿ ಮೀನುಗಾರರನ್ನು ತಕ್ಷಣವೇ ರಕ್ಷಿಸಲಾಗಿದ್ದು, ಸಂಭವಿಸಬಹುದಾಗಿದ್ದ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಮುಳುಗಡೆಗೆ ಒಳಗಾಗಿದ್ದ ಬೋಟ್ಅನ್ನು ಕೂಡ ಯಶಸ್ವಿಯಾಗಿ ದಡಕ್ಕೆ ಎಳೆದು ತರಲಾಗಿದೆ.
ಗಮನಾರ್ಹ ಸಂಗತಿಯೆಂದರೆ, ಕಳೆದ ವಾರವಷ್ಟೇ ಇದೇ ಗಂಗೊಳ್ಳಿ ಅಳಿವೆ ಬಳಿ ಭಾರಿ ಗಾತ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಬೋಟ್ವೊಂದು ಸಂಪೂರ್ಣವಾಗಿ ಮುಳುಗಿಹೋಗಿತ್ತು. ಆ ಸಂದರ್ಭದಲ್ಲೂ ಮಿಂಚಿನ ರಕ್ಷಣಾ ಕಾರ್ಯಾಚರಣೆ ನಡೆಸಿ ಬೋಟ್ನಲ್ಲಿದ್ದ ಎಲ್ಲಾ 27 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿತ್ತು.
ಆ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಅದೇ ಜಾಗದಲ್ಲಿ ಮತ್ತೊಂದು ಬೋಟ್ ಅಪಘಾತಕ್ಕೀಡಾಗಿರುವುದು ಸ್ಥಳೀಯ ಮೀನುಗಾರರಲ್ಲಿ ಆತಂಕ ಮತ್ತು ಆಕ್ರೋಶವನ್ನು ಹೆಚ್ಚಿಸಿದೆ. ಅಳಿವೆ ವ್ಯಾಪ್ತಿಯಲ್ಲಿ ಹೂಳೆತ್ತುವಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮೀನುಗಾರರು ಆಗ್ರಹಿಸಿದ್ದಾರೆ.