ತಿರುವನಂತಪುರಂ : ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬೆಚ್ಚಿಬೀಳಿಸುವ ಅಪರಾಧ ಘಟನೆಯೊಂದು ನಡೆದಿದ್ದು, ಕೇರಳ ಮೂಲದ ಇಬ್ಬರು ಮಹಿಳೆಯರನ್ನು ಅವರ ಅಪಾರ್ಟ್ಮೆಂಟ್ ಸಂಕೀರ್ಣದಲ್ಲೇ ವಾಸವಿದ್ದ ಸ್ನೇಹಿತೆಯೇ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ ಎಂದು ಮೃತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮೃತರನ್ನು ತ್ರಿಶೂರ್ ಜಿಲ್ಲೆಯ ಮುಣ್ಣುತ್ತಿ ಸಮೀಪದ ಮುಡಿಕೋಡ್ ನಿವಾಸಿ ಅಂಜನಾ (35) ಹಾಗೂ ತಿರುವನಂತಪುರಂ ಕೇಶವದಾಸಪುರಂ ನಿವಾಸಿ ಆನ್ ಮೇರಿ ಮ್ಯಾಥ್ಯೂ (40) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಅವರ ಸ್ನೇಹಿತೆ ಅನಿಲಾ ಎಂಬಾಕೆ ಕೊಲೆ ಮಾಡಿದ್ದು, ಸದ್ಯ ಸ್ಯಾನ್ ಜೋಸ್ ಪೊಲೀಸರು ಶಂಕಿತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಉದ್ಯೋಗಕ್ಕೆ ಸಂಬಂಧಿಸಿದ ವಿಚಾರದಲ್ಲಿ ಆನ್ ಮೇರಿ ಅವರೊಂದಿಗೆ ಶಂಕಿತ ಆರೋಪಿಗೆ ವಿವಾದವಿತ್ತು ಎಂದು ಅವರ ಕುಟುಂಬದ ಸ್ನೇಹಿತರು ತಿಳಿಸಿದ್ದಾರೆ. ಇದೇ ದ್ವೇಷದಲ್ಲಿ ಆರೋಪಿಯು ಆನ್ ಮೇರಿ ಅವರ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾಳೆ. ಇದೇ ವೇಳೆ ಮತ್ತೋರ್ವ ಮಹಿಳೆ ಅಂಜನಾ ಅವರಿಗೆ ಆರೋಪಿ ಅನಿಲಾ ಕಾರಿನಿಂದ ಡಿಕ್ಕಿ ಹೊಡೆಸಿ ಹತ್ಯೆ ಮಾಡಿದ್ದಾಳೆ ಎಂದು ಮೃತರ ಸಹೋದರ ಸಂಬಂಧಿ ಮಾಹಿತಿ ನೀಡಿದ್ದಾರೆ. ಆದರೆ, ಅಂಜನಾ ಅವರ ಕೊಲೆಯ ಹಿಂದಿನ ನಿಖರ ಉದ್ದೇಶದ ಬಗ್ಗೆ ಕುಟುಂಬಕ್ಕೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಮೃತ ಆನ್ ಮೇರಿ ಸುಮಾರು 10 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದು, ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕೊಟ್ಟಾಯಂನ ಚಿಂಗವನಂ ಮೂಲದ ಪಲ್ಲಾತ್ತ್ರಾ ಜೇಕಬ್ ಅವರನ್ನು ವಿವಾಹವಾಗಿದ್ದ ಅವರು ಪತಿಯೊಂದಿಗೆ ಅಲ್ಲಿಯೇ ವಾಸವಾಗಿದ್ದರು. ಮತ್ತೋರ್ವ ಮೃತ ಮಹಿಳೆ ಅಂಜನಾ ಕಳೆದ ಆರು ವರ್ಷಗಳಿಂದ ಕ್ಯಾಲಿಫೋರ್ನಿಯಾದಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪೀಚಿ ಸಮೀಪದ ವಿಲಂಗನ್ನೂರು ಮೂಲದ ಅವರ ಪತಿ ವಿಜೇಶ್ ಕೂಡ ಅಮೆರಿಕದಲ್ಲೇ ಉದ್ಯೋಗದಲ್ಲಿದ್ದಾರೆ. ಘಟನೆಯ ಸಂಬಂಧ ಸ್ಯಾನ್ ಜೋಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.