ಮುಂಬೈ : ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಸಂಪೂರ್ಣ ತನಿಖೆಯನ್ನು ಸಿಬಿಐಗೆ (ಕೇಂದ್ರೀಯ ತನಿಖಾ ದಳ) ವಹಿಸಿ ಬಾಂಬೆ ಹೈಕೋರ್ಟ್ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡು ಹಿರಿಯ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ದಿಶಾ ಅವರ ತಂದೆ ಸತೀಶ್ ಸಾಲಿಯಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಸತೀಶ್ ಅವರ ಹೇಳಿಕೆಯನ್ನು ಸಿಬಿಐ ದಾಖಲಿಸಿಕೊಳ್ಳಬೇಕು ಮತ್ತು ಮುಂಬೈನ ಮಾಲ್ವಾಣಿ ಪೊಲೀಸ್ ಠಾಣೆಯು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಆದೇಶಿಸಿದೆ. ತನಿಖೆ ವೇಳೆ ಸಾಕ್ಷ್ಯಾಧಾರಗಳು ದೊರೆತವರ ವಿರುದ್ಧ ಮಾತ್ರ ಕ್ರಮ ಜರುಗಿಸಬೇಕು, ಸಾಕ್ಷಿಯಿಲ್ಲದೆ ಯಾರನ್ನೂ ಆರೋಪಿಯನ್ನಾಗಿ ಮಾಡಬಾರದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಪೋಸ್ಟ್‌ಮಾರ್ಟಂ ವರದಿ ಸುತ್ತ ಅನುಮಾನ: 2020ರ ಜೂನ್ 8ರಂದು ದಿಶಾ ಸಾಲಿಯಾನ್ ಮೃತಪಟ್ಟಿದ್ದು, ಕೆಲವೇ ದಿನಗಳಲ್ಲಿ ಸುಶಾಂತ್ ಸಿಂಗ್ ರಜಪೂತ್ ಕೂಡ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಎರಡೂ ಸಾವುಗಳ ನಡುವೆ ಲಿಂಕ್ ಇದೆ ಎಂಬ ಸಂಶಯ ದಟ್ಟವಾಗಿತ್ತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪೋಸ್ಟ್‌ಮಾರ್ಟಂ ವರದಿಯನ್ನು ಪ್ರಬಲವಾಗಿ ಪ್ರಶ್ನಿಸಿದ್ದು, “14ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿಯ ಮುಖಕ್ಕೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಉಲ್ಲೇಖಿಸಿರುವುದು ತೀವ್ರ ಅನುಮಾನಾಸ್ಪದವಾಗಿದೆ. ಕೇವಲ 1-2 ಹಲ್ಲುಗಳು ಮಾತ್ರ ಮುರಿದಿವೆ ಎಂದು ನಮೂದಿಸಲಾಗಿದೆ” ಎಂದು ವಾದಿಸಿದ್ದರು. ಜೊತೆಗೆ ಪ್ರಭಾವಿ ವ್ಯಕ್ತಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಇದೀಗ ಸಿಬಿಐ ತನಿಖೆಯಿಂದಷ್ಟೇ ನೈಜ ಸತ್ಯ ಹೊರಬರಬೇಕಿದೆ.
ಇದನ್ನು ಓದಿ : Kundapura : ಗಂಗೊಳ್ಳಿ ಅಳಿವೆಯಲ್ಲಿ ಮುಳುಗಿದ ಮೀನುಗಾರಿಕಾ ಬೋಟ್; 6 ಮಂದಿ ಮೀನುಗಾರರು ಅಪಾಯದಿಂದ ಪಾರು!