ಬೆಂಗಳೂರು : ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಳೆದ ಜನವರಿ 31ರಂದು ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು ಕೊನೆಗೂ ಸುಮಾರು 8 ತಿಂಗಳ ಸುದೀರ್ಘ ಹುಡುಕಾಟದ ಬಳಿಕ ಸಿಐಡಿ (CID) ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ತನಿಷ್ಕಾ ಹಾಗೂ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ತೇಜಸ್ವಿನಿ ಎಂಬಿಬ್ಬರು ಯುವತಿಯರ ಈ ನಾಪತ್ತೆ ಪ್ರಕರಣ ಹಾಗೂ ಪತ್ತೆಯಾದ ಹೈಡ್ರಾಮಾ ಸಂಪೂರ್ಣವಾಗಿ ಸಿನಿಮಾ ಕಥೆಯನ್ನು ಮೀರಿಸುವಂತಿದೆ.
ಹೈಕೋರ್ಟ್ ಮೆಟ್ಟಿಲೇರಿದ್ದ ಕುಟುಂಬ: ಯುವತಿಯರು ನಾಪತ್ತೆಯಾಗಿ ತಿಂಗಳುಗಳೇ ಕಳೆದರೂ ಪತ್ತೆಯಾಗದಿದ್ದಾಗ ತನಿಷ್ಕಾ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಸೂಚನೆ ಹಾಗೂ ನಿರ್ದೇಶನದ ಮೇರೆಗೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಯಿತು. ಕಳೆದ ಮೂರು ತಿಂಗಳಿಂದ ಸಿಐಡಿ ಅಧಿಕಾರಿಗಳ ವಿಶೇಷ ತಂಡ ಯುವತಿಯರ ಸುಳಿವಿಗಾಗಿ ತೀವ್ರ ಹುಡುಕಾಟ ನಡೆಸುತ್ತಿತ್ತು.
ಮಲೆ ಮಹದೇಶ್ವರ ಬೆಟ್ಟದ ಸೆಲ್ಫಿ ಸುಳಿವು: ತನಿಖೆಯ ಮೊದಲ ಹಂತದಲ್ಲಿ ಇಬ್ಬರೂ ಯುವತಿಯರು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವಿಚಾರ ಬೆಳಕಿಗೆ ಬಂದಿತ್ತು. ಅಲ್ಲಿ ಮಗುವೊಂದರ ಜೊತೆ ಇವರು ಆಟವಾಡುತ್ತಿದ್ದಾಗ, ಆ ಮಗುವಿನ ತಾಯಿ ಇಬ್ಬರ ಜೊತೆ ಸೆಲ್ಫಿ ತೆಗೆದುಕೊಂಡಿದ್ದರು. ಈ ಫೋಟೋ ಸಿಐಡಿಗೆ ಸಿಕ್ಕಿತ್ತಾದರೂ, ತದನಂತರ ಯುವತಿಯರು ಎಲ್ಲಿಗೆ ಹೋದರು ಎಂಬ ಸುಳಿವು ಸಿಗದೆ ತನಿಖೆ ಕಷ್ಟಕರವಾಗಿತ್ತು.
“ನಮಗೆ ಯಾರೂ ಇಲ್ಲ” ಎಂದು ಸುಳ್ಳು ಹೇಳಿ ಮದುವೆ: ತನಿಖೆಯ ಮುಂದುವರಿದ ಭಾಗವಾಗಿ ತಿಳಿದುಬಂದ ಸತ್ಯವೆಂದರೆ, ಮಲೆ ಮಹದೇಶ್ವರ ಬೆಟ್ಟದಲ್ಲಿದ್ದಾಗ ಇವರಿಗೆ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯವಾಗಿತ್ತು. ಯುವಕನ ಕುಟುಂಬಸ್ಥರ ವಿಚಾರಣೆ ವೇಳೆ ತನಿಷ್ಕಾ ಹಾಗೂ ತೇಜಸ್ವಿನಿ ತಮಗೆ ತಂದೆ-ತಾಯಿ ಸೇರಿದಂತೆ ಯಾರೂ ಇಲ್ಲ, ತಾವಿಬ್ಬರೂ ಅನಾಥ ಸಹೋದರಿಯರು ಎಂದು ನಂಬಿಸಿದ್ದರು. ಬಳಿಕ ಆ ಯುವಕನ ಜೊತೆ ತೆರಳಿದ್ದ ತನಿಷ್ಕಾ ಆತನನ್ನು ಮದುವೆಯಾಗಿದ್ದಳು. ತೇಜಸ್ವಿನಿಯನ್ನು ತನ್ನ ತಂಗಿ ಎಂದು ಪರಿಚಯಿಸಿ ತಮ್ಮೊಂದಿಗೇ ಇರಿಸಿಕೊಂಡಿದ್ದಳು. ನಂತರ ತನಿಷ್ಕಾ ಆ ಯುವಕನನ್ನು ಮದುವೆಯಾಗಿದ್ದಾಳೆ. ಮದುವೆಯ ಬಳಿಕ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದು, ತೇಜಸ್ವಿನಿಯನ್ನು ತನ್ನ ತಂಗಿ ಎಂದು ಪರಿಚಯಿಸಿ ತಮ್ಮೊಂದಿಗೇ ಇರಿಸಿಕೊಂಡಿದ್ದಳು ಎಂಬುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.
ಸಿಮ್ ಕಾರ್ಡ್ ಖರೀದಿಸಲು ಹೋಗಿ ಸಿಕ್ಕಿಬಿದ್ದದ್ದು ಹೇಗೆ?: ಯುವತಿಯರನ್ನು ಪತ್ತೆಹಚ್ಚಲು ಸಿಐಡಿಗೆ ನೆರವಾಗಿದ್ದು ಒಂದು ಆಧಾರ್ ಕಾರ್ಡ್! ಇತ್ತೀಚೆಗೆ ತನಿಷ್ಕಾ ಹೊಸ ಸಿಮ್ ಕಾರ್ಡ್ ಖರೀದಿಸಲು ತನ್ನ ಆಧಾರ್ ಸಂಖ್ಯೆಯನ್ನು ಬಳಸಿದ್ದಳು. ಆಧಾರ್ ಸಂಖ್ಯೆ ಬಳಸುತ್ತಿದ್ದಂತೆ ಟೆಲಿಕಾಂ ಸರ್ವಿಸ್ ಪ್ರೊವೈಡರ್‌ನಿಂದ ಸಿಐಡಿಗೆ ಅಲರ್ಟ್ ಮೆಸೇಜ್ ಲಭ್ಯವಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಐಡಿ ಅಧಿಕಾರಿಗಳು ಆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಇಬ್ಬರೂ ಯುವತಿಯರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಪ್ರಸ್ತುತ ತನಿಷ್ಕಾ ಗರ್ಭಿಣಿಯಾಗಿದ್ದು, ಸಿಐಡಿ ಅಧಿಕಾರಿಗಳು ಇಬ್ಬರನ್ನೂ ಹೈಕೋರ್ಟ್ ಮುಂದೆ ಹಾಜರುಪಡಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಇದನ್ನು ಓದಿ : Surathkal : ಬೆಂಗ್ರೆ ಸೂಪರ್ ಸ್ಟಾರ್ ಗ್ರೌಂಡ್ ಬಳಿ ಇ-ಆಟೋ ಪಲ್ಟಿ; ಮೂವರಿಗೆ ಗಾಯ, ಮಹಿಳೆಯ ಬೆರಳು ತುಂಡು!