ಕಾಸರಗೋಡು : ಅಕ್ರಮ ಮರಳು ಸಾಗಣೆ ದೋಣಿಯ ಮೇಲೆ ಕರಾವಳಿ ಪೊಲೀಸರು ನಡೆಸಿದ ದಾಳಿಯ ವೇಳೆ ತಪ್ಪಿಸಿಕೊಳ್ಳಲು ನದಿಗೆ ಜಿಗಿದು ನಾಪತ್ತೆಯಾಗಿದ್ದ ಯುವಕನ ಮೃತದೇಹ 4 ದಿನಗಳ ನಿರಂತರ ಹುಡುಕಾಟದ ಬಳಿಕ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.
ಆರಿಕಾಡಿ ಕಡವತ್ ನಿವಾಸಿ, ಅಬ್ದುಲ್ ಖಾದರ್ ಮತ್ತು ಮೈಮುನಬಾ ದಂಪತಿಯ ಪುತ್ರ ಇಬ್ರಾಹಿಂ (35) ಮೃತಪಟ್ಟ ಯುವಕ.
ಸೆಪ್ಟೆಂಬರ್ 7ರಂದು ರಾತ್ರಿ 8 ಗಂಟೆ ಸುಮಾರಿಗೆ ಶಿರಿಯಾ ನದಿಯಲ್ಲಿ ಅಕ್ರಮ ಮರಳು ಸಾಗಣೆ ತಡೆಗೆ ಕರಾವಳಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ದೋಣಿಯಲ್ಲಿದ್ದವರು ನೀರಿಗೆ ಜಿಗಿದಿದ್ದು, ಇಬ್ಬರು ಈಜಾಡಿ ದಡ ಸೇರಿದ್ದರು. ಆದರೆ ಇಬ್ರಾಹಿಂ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.
ಕೋಸ್ಟಲ್ ಪೊಲೀಸ್, ಕುಂಬಳೆ ಪೊಲೀಸ್ ಹಾಗೂ ಸ್ಥಳೀಯ ಮೀನುಗಾರರು ತೀವ್ರ ಶೋಧ ನಡೆಸಿದ್ದರೂ ಯುವಕ ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಉಡುಪಿಯ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ತಂಡವನ್ನು ಸ್ಥಳಕ್ಕೆ ಕರೆಯಿಸಿ ಆಳವಾದ ಹುಡುಕಾಟ ನಡೆಸಿದ ಬಳಿಕ, ಶಿರಿಯಾ ನದಿಯ ಅಳಿವೆಬಾಗಿಲು ಪ್ರದೇಶದಲ್ಲಿ ಮೀನುಗಾರರ ಬಲೆಗೆ ಸಿಲುಕಿದ ಸ್ಥಿತಿಯಲ್ಲಿದ್ದ ಮೃತದೇಹವನ್ನು ಹೊರತೆಗೆಯಲಾಗಿದೆ. ಕುಂಬಳೆ ಕೋಸ್ಟಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ.
ಇದನ್ನು ಓದಿ : Kundapura : 8 ಶಾಲಾ ಮಕ್ಕಳನ್ನು ಬಲಿ ಪಡೆದ ಭೀಕರ ರಸ್ತೆ ಅಪಘಾತ – 10 ವರ್ಷಗಳ ಬಳಿಕ ಬಸ್ ಚಾಲಕನಿಗೆ ಜೈಲು ಶಿಕ್ಷೆ, ದಂಡ!