ಚಂಡೀಗಢ : ಚಂಡೀಗಢ ಮತ್ತು ಮೊಹಾಲಿಯ ವಿವಿಧ ಸ್ಥಳಗಳಲ್ಲಿ ಗುರುವಾರ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಏಕಕಾಲದಲ್ಲಿ ಭರ್ಜರಿ ಶೋಧ ಕಾರ್ಯಚರಣೆ ನಡೆಸಿದ್ದಾರೆ. ಈ ವೇಳೆ ಮೊಹಾಲಿಯ ಬಹುಮಹಡಿ ಕಟ್ಟಡವೊಂದರಲ್ಲಿ ಅಡಗಿಸಿಟ್ಟಿದ್ದ ನಗದನ್ನು ನಾಶಪಡಿಸಲು ಅಥವಾ ಮರೆಮಾಚಲು ಆರೋಪಿಗಳು ಸಿನಿಮೀಯ ಮಾದರಿಯಲ್ಲಿ ನೋಟಿನ ಚೀಲಗಳನ್ನು 9ನೇ ಮಹಡಿಯಿಂದ ಕೆಳಕ್ಕೆ ಎಸೆದಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಟ್ಟಡದ ಮೇಲ್ಭಾಗದಿಂದ 500 ರೂಪಾಯಿ ಮುಖಬೆಲೆಯ ನೋಟುಗಳ ಕಟ್ಟುಗಳು ಕೆಳಕ್ಕೆ ಬೀಳುತ್ತಿರುವುದು ಕಂಡುಬಂದಿದೆ. ನೆಲದ ಮೇಲೆ ಬಿದ್ದಿದ್ದ ಎರಡು ಚೀಲಗಳು ಹಾಗೂ ಸುತ್ತಮುತ್ತ ಚದುರಿಹೋಗಿದ್ದ ನೋಟುಗಳ ಬಂಡಲ್‌ಗಳು ಅಧಿಕಾರಿಗಳ ಕೈವಶವಾಗಿವೆ. ಪ್ರಾಥಮಿಕ ಮಾಹಿತಿಯಂತೆ ಸ್ಥಳದಿಂದ ಸುಮಾರು 25 ಲಕ್ಷ ರೂಪಾಯಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಗ್ರೇಟರ್ ಮೊಹಾಲಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (GMADA) ವ್ಯಾಪ್ತಿಯಲ್ಲಿ ಭೂ ಬಳಕೆ ಬದಲಾವಣೆ (CLU) ಪರವಾನಗಿ ಪಡೆಯುವ ಪ್ರಕ್ರಿಯೆಯಲ್ಲಿ ನೂರಾರು ಕೋಟಿ ರೂಪಾಯಿ ವಂಚನೆ ಮತ್ತು ಆರ್ಥಿಕ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಪ್ರಮುಖ ಬಿಲ್ಡರ್‌ಗಳಿಗೆ ಸೇರಿದ ಸುಮಾರು ಒಂದು ಡಜನ್ ಸ್ಥಳಗಳಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

