ಮೈಸೂರು : ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರಿಗೆ ಶೀಘ್ರದಲ್ಲೇ ಬಿಡುಗಡೆ ಭಾಗ್ಯ ಸಿಗಲಿ ಎಂದು ಹಾರೈಸಿ ಅವರ ಅಭಿಮಾನಿಗಳು ಮೈಸೂರಿನ ಪ್ರಸಿದ್ಧ ಹಿಮಾಮ್ ಶಾಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಾನೂನು ಸಂಕಷ್ಟದಲ್ಲಿರುವ ತಮ್ಮ ನೆಚ್ಚಿನ ನಟ ಶೀಘ್ರವಾಗಿ ಹೊರಬರಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ದರ್ಗಾಕ್ಕೆ ಭೇಟಿ ನೀಡಿದ ಅಭಿಮಾನಿಗಳು ದರ್ಶನ್ ಅವರ ಫೋಟೋಗಳನ್ನು ಹಿಡಿದು ವಿಶೇಷ ದುವಾ (ಪ್ರಾರ್ಥನೆ) ಮಾಡಿದರು. ದರ್ಶನ್ ಅವರ ಮೇಲಿನ ಅಭಿಮಾನದಿಂದಾಗಿ ವಿವಿಧ ಧರ್ಮದ ಪ್ರಾರ್ಥನಾ ಮಂದಿರಗಳಲ್ಲಿ ಅಭಿಮಾನಿಗಳು ಹರಕೆಗಳನ್ನು ಹೊರುತ್ತಿದ್ದು, ಈ ಬಾರಿ ಮುಸ್ಲಿಂ ಬಾಂಧವರ ಪವಿತ್ರ ಸ್ಥಳವಾದ ದರ್ಗಾದಲ್ಲಿ ಈ ವಿಶೇಷ ಪೂಜೆ ನಡೆದಿದೆ.
ದರ್ಶನ್ ಅವರು ಜೈಲಿನಲ್ಲಿದ್ದರೂ ಅವರ ಅಭಿಮಾನಿ ಬಳಗ ಮಾತ್ರ ಕುಗ್ಗಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ದರ್ಶನ್ ಶೀಘ್ರದಲ್ಲೇ ಮನೆಗೆ ಮರಳಲಿದ್ದಾರೆ ಎಂಬ ನಂಬಿಕೆಯಲ್ಲಿರುವ ಅಭಿಮಾನಿಗಳು, ರಾಜ್ಯದ ವಿವಿಧೆಡೆ ದೇವಸ್ಥಾನ ಮತ್ತು ದರ್ಗಾಗಳಲ್ಲಿ ನಿರಂತರವಾಗಿ ಪ್ರಾರ್ಥನೆಗಳನ್ನು ನಡೆಸುತ್ತಿದ್ದಾರೆ.

