Friday, April 17, 2026
Homeತಾಜಾ ಸುದ್ದಿDharwad Yogesh Gowda Murder Case : ಕೈ ಶಾಸಕ ವಿನಯ್ ಕುಲಕರ್ಣಿ ಸೇರಿ 17...

Dharwad Yogesh Gowda Murder Case : ಕೈ ಶಾಸಕ ವಿನಯ್ ಕುಲಕರ್ಣಿ ಸೇರಿ 17 ಮಂದಿ ದೋಷಿ!; ಕೋರ್ಟ್ ಮಹತ್ವದ ತೀರ್ಪು; ಇಂದು ಶಿಕ್ಷೆ ಪ್ರಮಾಣ ಪ್ರಕಟ!

ಬೆಂಗಳೂರು/ಧಾರವಾಡ (ಎ.16): ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ (Dharwad Yogesh Gowda Murder Case) ಅಂತಿಮ ತೀರ್ಪು ಪ್ರಕಟವಾಗಿದೆ. ಮಾಜಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ 21ರ ಪೈಕಿ 17 ಮಂದಿ ಆರೋಪಿಗಳು ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Bengaluru Special Court Verdict) ನಿನ್ನೆ (ಏಪ್ರಿಲ್ 15) ತೀರ್ಪು ನೀಡಿ ಆದೇಶ ಹೊರಡಿಸಿದೆ. ಈ ತೀರ್ಪಿನಿಂದಾಗಿ ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ ಹೋಗಬೇಕಾಗಿದ್ದು, ಇಂದು (ಏಪ್ರಿಲ್ 16) ಶಿಕ್ಷೆಯ ಪ್ರಮಾಣದ ಬಗ್ಗೆ ವಾದಮಂಡನೆ ನಡೆಯಲಿದೆ. ಬಳಿಕ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನೂ ಸಹ ಪ್ರಕಟಿಸಲಿದೆ.


21ರಲ್ಲಿ 17 ಮಂದಿ ಅಪರಾಧಿಗಳು:
ಒಟ್ಟು 21 ಆರೋಪಿಗಳ ಪೈಕಿ ಇಬ್ಬರು ಮಾಫಿಸಾಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್, 19 ಆರೋಪಿಗಳ ಪೈಕಿ 17 ಮಂದಿಯನ್ನು ದೋಷಿ ಎಂದು ತೀರ್ಪು ನೀಡಿದೆ. ಎ1 ಬಸವರಾಜ ಮುತ್ತಗಿ ಮಾಫಿಸಾಕ್ಷಿಯಾಗಿ ಹೇಳಿಕೆ ನೀಡಿದ್ದರೆ, ಎ17 ಶಿವಾನಂದ ಮಾಫಿ ಸಾಕ್ಷಿಯಾದ ಬಳಿಕವೂ ಪ್ರತಿಕೂಲ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮತ್ತೆ ಎ17 ಆರೋಪಿಯನ್ನಾಗಿಸುವಂತೆ ಸಿಬಿಐ ಅರ್ಜಿ ಸಲ್ಲಿಸಿದೆ. ಇನ್ನು ಪ್ರಕರಣದ ಎ20 ವಾಸುದೇವ ನಿಲೇಕಣಿ, ಎ21 ಸೋಮಶೇಖರ ಅವರನ್ನು ಬಿಡುಗಡೆಗೆ ಕೋರ್ಟ್ ಆದೇಶಿಸಿದೆ. ದೋಷಿಗಳೆಂದು ಘೋಷಿತರಾದವರ ಪೈಕಿ ವಿನಯ್ ಕುಲಕರ್ಣಿ ಸೇರಿ ಪ್ರಮುಖ ಆರೋಪಿಗಳಿದ್ದಾರೆ.ವಿಕ್ರಮ್ (ಎ2), ಕೀರ್ತಿ ಕುಮಾರ್ (ಎ3), ಸಂದೀಪ್ (ಎ4), ವಿನಾಯಕ್ (ಎ5), ಮಹಾಬಲೇಶ್ವರ್ ಅಲಿಯಾಸ್ ಮುದಕ (ಎ6), ಸಂತೋಷ್ (ಎ7), ದಿನೇಶ್ (ಎ8), ಅಶ್ವಥ್ (ಎ9), ಸುನಿಲ್ (ಎ10), ನಜೀರ್ ಅಹಮದ್ (ಎ11), ಷಾನವಾಜ್ (ಎ12), ನೂತನ್ (ಎ13), ಹರ್ಷಿತ್ (ಎ14), ವಿನಯ್ ಕುಲಕರ್ಣಿ (ಎ15), ಚಂದ್ರು ಮಾಮ (ಎ16), ವಿಕಾಸ್ ಕಲಬುರ್ಗಿ (ಎ18), ಚನ್ನಕೇಶವ ಟಿಂಗರಿಕರ್ (ಎ19) 

ಪ್ರಕರಣದ ಹಿನ್ನೆಲೆ: ಧಾರವಾಡದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್‌ ಗೌಡ ಅವರನ್ನು 2016ರ ಜೂನ್ 15ರಂದು ಸಪ್ತಾಪುರ ಬಡಾವಣೆಯ ಜಿಮ್‌ನಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಈ ಸಂಬಂಧ ಧಾರವಾಡದ ಉಪನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಕೊಲೆಯಾದ ಯೋಗೇಶ್‌ ಗೌಡ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ 2019ರಲ್ಲಿ ಈ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ವಹಿಸಲಾಗಿತ್ತು. ಬಳಿಕ ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ತಿಳಿದು ಬಂದಿತ್ತು. ಅಲ್ಲದೇ ಈ ಕೊಲೆಯಲ್ಲಿ ವಿನಯ್‌ ಕುಲಕರ್ಣಿ ಕೈವಾಡವಿರುವ ಶಂಕೆ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ 2020ರ ನವೆಂಬರ್ 5ರಂದು ಸಿಬಿಐ ಅಧಿಕಾರಿಗಳು, ವಿನಯ್‌ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್‌ ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು. ತನಿಖೆ ನಡೆಸಿದ ಪೊಲೀಸರ ಮುಂದೆ ಆರು ಜನ ಆರೋಪಿಗಳು ಶರಣಾಗಿದ್ದರು. ಯೋಗಿಶ್ ಗೌಡ ಕುಟುಂಬಸ್ಥರ ಮನವಿ ಮೇರೆಗೆ ತನಿಖೆಯನ್ನು ಸಿಬಿಐಗೆ ನೀಡಲಾಗಿತ್ತು. 2019ರಲ್ಲಿ ಸಿಬಿಐಗೆ ನೀಡಿ ರಾಜ್ಯ ಸರ್ಕಾರ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ, ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಶಾಸಕ ವಿನಯ್ ಕುಲಕರ್ಣಿಯನ್ನು ಬಂಧಿಸಿದ್ದರು. ಇತ್ತೀಚೆಗಷ್ಟೇ ವಿನಯ್ ಕುಲಕರ್ಣಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಈಗ ನ್ಯಾಯಾಲಯದ ಈ ತೀರ್ಪು ಅವರಿಗೆ ಭಾರಿ ಹಿನ್ನಡೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!