ಕಾಸರಗೋಡು: ಅಂಗನವಾಡಿ ಮುಂಭಾಗ ಆಟವಾಡುತ್ತಿದ್ದ ಸಂದರ್ಭದಲ್ಲಿ ಧ್ವಜಸ್ತಂಭಕ್ಕೆ ಕಟ್ಟಲಾಗಿದ್ದ ಹಗ್ಗ ಆಕಸ್ಮಿಕವಾಗಿ ಕುತ್ತಿಗೆಗೆ ಬಿಗಿದುಕೊಂಡು 11 ವರ್ಷದ ಶಾಲಾ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಡಿಕೈ ಸಮೀಪದ ಕಾಂಜಿಪೊಯಿಲ್ನಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಮೃತ ದುರ್ದೈವಿ ಬಾಲಕನನ್ನು ಕಾಂಜಿಪೊಯಿಲ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ, ರಾಜೇಶ್ ಮತ್ತು ನೀತು ದಂಪತಿಯ ಪುತ್ರ ಅನೇಕ್ (11) ಎಂದು ಗುರುತಿಸಲಾಗಿದೆ.
ಕಾಂಜಿಪೊಯಿಲ್ನ ನಂದನಕುಳಿ ಅಂಗನವಾಡಿ ಕೇಂದ್ರದ ಆವರಣದಲ್ಲಿ ಗುರುವಾರ ಸಂಜೆ ಸುಮಾರು 5 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಅನೇಕ್ ಎಂದಿನಂತೆ ಅಂಗನವಾಡಿ ಮುಂಭಾಗ ಆಟವಾಡುತ್ತಿದ್ದಾಗ, ಅಲ್ಲಿನ ಧ್ವಜಸ್ತಂಭಕ್ಕೆ ಕಟ್ಟಲಾಗಿದ್ದ ಹಗ್ಗ ಆಕಸ್ಮಿಕವಾಗಿ ಆತನ ಕುತ್ತಿಗೆಗೆ ಸುತ್ತಿಕೊಂಡು ಬಿಗಿದುಕೊಂಡಿದೆ ಎನ್ನಲಾಗಿದೆ.
ಇದೇ ರಸ್ತೆಯಲ್ಲಿ ಸಾಗುತ್ತಿದ್ದ ಆಟೋರಿಕ್ಷಾ ಚಾಲಕರೊಬ್ಬರು ಇದನ್ನು ಗಮನಿಸಿ ತಕ್ಷಣವೇ ಧಾವಿಸಿ ಹಗ್ಗದಿಂದ ಬಾಲಕನನ್ನು ಬಿಡಿಸಿದ್ದಾರೆ. ಕೂಡಲೇ ಆತನನ್ನು ಕನ್ಹಾಂಗಾಡ್ನ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಬಾಲಕ ಅಸುನೀಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಆಟವಾಡುವಾಗ ಸಂಭವಿಸಿದ ಆಕಸ್ಮಿಕ ಅವಘಡದಿಂದ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದ್ದು, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ : Moodbidri : ಕೆಫೆಯಲ್ಲಿದ್ದ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ಗಿರಿ; ಮೂವರ ವಿರುದ್ಧ ಎಫ್ಐಆರ್!