ಮೀರುತ್: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಉತ್ತರ ಪ್ರದೇಶದ ಮೀರುತ್ನ ಸೌರಭ್ ರಜಪೂತ್ ಕೊಲೆ ಪ್ರಕರಣದಲ್ಲಿ ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾಗೆ ಸ್ಥಳೀಯ ನ್ಯಾಯಾಲಯ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.
ಗಂಡನನ್ನು ಕೊಂದು, ದೇಹವನ್ನು ತುಂಡರಿಸಿ ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್ನಲ್ಲಿ ಸಿಮೆಂಟ್ ಮತ್ತು ಮರಳಿನ ಮಿಶ್ರಣದೊಂದಿಗೆ ಮುಚ್ಚಿಟ್ಟಿದ್ದ ಈ ಭೀಕರ ಪ್ರಕರಣದಲ್ಲಿ 126 ವಿಚಾರಣೆಗಳು ಹಾಗೂ 22 ಸಾಕ್ಷಿಗಳನ್ನು ಆಲಿಸಿದ ಬಳಿಕ ಜಿಲ್ಲಾ ನ್ಯಾಯಾಧೀಶ ಅರವಿಂದ್ ಕುಮಾರ್ ಮಿಶ್ರಾ ಅವರು ಈ ಕಠಿಣ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.
2025ರ ಮಾರ್ಚ್ 3ರಂದು ಮುಸ್ಕಾನ್ ತನ್ನ ಪತಿ ಸೌರಭ್ಗೆ ಆಹಾರದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿದ್ದಳು. ಬಳಿಕ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. ನಂತರ ಮೃತದೇಹವನ್ನು ತುಂಡರಿಸಿ ದೊಡ್ಡ ನೀಲಿ ಪ್ಲಾಸ್ಟಿಕ್ ಡ್ರಮ್ನಲ್ಲಿ ತುಂಬಿ, ಸಿಮೆಂಟ್ ಹಾಗೂ ಮರಳಿನ ಮಿಶ್ರಣದಿಂದ ಮುಚ್ಚಿದ್ದರು.
ಕೊಲೆಯ ನಂತರ ಆರೋಪಿಗಳು ಹಿಮಾಚಲ ಪ್ರದೇಶಕ್ಕೆ ಪರಾರಿಯಾಗಿದ್ದರು. ಸೌರಭ್ ಬದುಕಿದ್ದಾನೆಂದು ನಂಬಿಸಲು ಆತನ ಮೊಬೈಲ್ನಿಂದ ಮೆಸೇಜ್ ಕಳುಹಿಸುತ್ತಿದ್ದರು. ಮಾರ್ಚ್ 17ರಂದು ದಂಪತಿಯ 6 ವರ್ಷದ ಮಗಳು “ಪಪ್ಪಾ ಡ್ರಮ್ನಲ್ಲಿದ್ದಾರೆ” ಎಂದು ಹೇಳಿದ ಬಳಿಕ ಸತ್ಯ ಹೊರಬಿದ್ದು, ಪೊಲೀಸರು ನೀಲಿ ಡ್ರಮ್ನಲ್ಲಿದ್ದ ಶವದ ಅವಶೇಷಗಳನ್ನು ವಶಪಡಿಸಿಕೊಂಡು ಇಬ್ಬರನ್ನೂ ಬಂಧಿಸಿದ್ದರು.