ಸಕಲೇಶಪುರ : ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದ ದರ್ಬಾರ್ ಪೇಟೆ ನಿವಾಸಿ ಮನು ಎಲ್.ಎನ್. (29) ಮೃತಪಟ್ಟ ದುರ್ದೈವಿ. ಮೇ 10, 2026 ರಂದು ಆಲೂರು ತಾಲೂಕು ತೊಗರನಹಳ್ಳಿ ಗ್ರಾಮದ ಕಾಂಚನ ಅವರೊಂದಿಗೆ ಮನು ಅವರ ವಿವಾಹ ನಿಶ್ಚಯವಾಗಿತ್ತು. ಮದುವೆ ಸಂಭ್ರಮದ ಭಾಗವಾಗಿ ಪ್ರೀ-ವೆಡ್ಡಿಂಗ್ ಶೂಟ್ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ವಧುವನ್ನು ಕರೆತರಲು ಮನು ಅವರು ಇಂದು ಬೆಳಿಗ್ಗೆ ಕಾರಿನಲ್ಲಿ ಒಬ್ಬರೇ ಹೊರಟಿದ್ದರು.
ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದ ಬಳಿ ಕಾರು ತಲುಪುತ್ತಿದ್ದಂತೆ, ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮನು ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಶೋಕ ಮಡುಗಟ್ಟಿದೆ.

