Homeತಾಜಾ ಸುದ್ದಿSullia : ಪೆರುವಾಯೆ ಬಳಿ ಪತ್ನಿ ಮತ್ತು ಅತ್ತೆಗೆ ಚಾಕುವಿನಿಂದ ಇರಿದು ಕಾಡಿನಲ್ಲಿ ಅಡಗಿದ್ದ ವ್ಯಕ್ತಿಯ...

Sullia : ಪೆರುವಾಯೆ ಬಳಿ ಪತ್ನಿ ಮತ್ತು ಅತ್ತೆಗೆ ಚಾಕುವಿನಿಂದ ಇರಿದು ಕಾಡಿನಲ್ಲಿ ಅಡಗಿದ್ದ ವ್ಯಕ್ತಿಯ ಬಂಧನ!

ಸುಳ್ಯ : ಪೆರುವಾಯೆ ಗ್ರಾಮದ ಕಣವು ಸಮೀಪದ ಆನವುಗುಂಡಿಯಲ್ಲಿ ಭಾನುವಾರ ಮಧ್ಯಾಹ್ನ ತಮ್ಮ ಪತ್ನಿ ಹಾಗೂ ಅತ್ತೆಗೆ ಚಾಕುವಿನಿಂದ ತೀವ್ರವಾಗಿ ಇರಿದು ಬಳಿಕ ಹತ್ತಿರದ ಅರಣ್ಯಕ್ಕೆ ಓಡಿ ಅಡಗಿದ್ದ ವ್ಯಕ್ತಿಯನ್ನು ಬಳ್ಳಾರೆ ಪೊಲೀಸರು ಸಂಜೆ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಆನವುಗುಂಡಿ ನಿವಾಸಿ ಗಣೇಶ್ ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಆತನ ಪತ್ನಿ ವಿನುತಾ ಹಾಗೂ ಅತ್ತೆ ಕುಸುಮಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಹೆಚ್ಚಾಗಿ ಅತ್ತೆ ಮನೆಯಲ್ಲೇ ನೆಲೆಸುತ್ತಿದ್ದ ಗಣೇಶ್, ಸೆಪ್ಟೆಂಬರ್ 6ರ ಭಾನುವಾರ ಮಧ್ಯಾಹ್ನ ಪತ್ನಿ ವಿನುತಾ ಮತ್ತು ಬೆಳ್ಳಾರೆಯ ಸಂಬಂಧಿಕರೊಂದಿಗೆ ಆಟೋದಲ್ಲಿ ಆನವುಗುಂಡಿಯಲ್ಲಿರುವ ತನ್ನ ಮನೆಗೆ ಬಂದಿದ್ದನು. ಮನೆಯಲ್ಲಿ ಸುಮಾರು ಅರ್ಧ ಗಂಟೆ ಕಳೆದ ನಂತರ, ಗಣೇಶ್, ಆತನ ಪತ್ನಿ, ಅತ್ತೆ, ಮಗ ಮತ್ತು ಸಂಬಂಧಿಕರು ಮತ್ತೆ ಅತ್ತೆ ಮನೆಗೆ ಹೊರಡಲು ರಸ್ತೆಗೆ ಬಂದಿದ್ದಾರೆ.

ಈ ವೇಳೆ ಗಣೇಶ್ ಏಕಾಏಕಿ ಪತ್ನಿ ವಿನುತಾಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ. ಇದನ್ನು ತಡೆಯಲು ಮಧ್ಯ ಪ್ರವೇಶಿಸಿದ ಅತ್ತೆ ಕುಸುಮಾಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಆ ಬಳಿಕ ವಿನುತಾಗೂ ಚಾಕು ಇರಿಯಲಾಗಿದೆ. ಗಣೇಶನ ಈ ರೌದ್ರಾವತಾರ ಕಂಡು ಹೆದರಿದ ಆತನ ಮಗ ಹಾಗೂ ಜೊತೆಯಲ್ಲಿದ್ದ ಸಂಬಂಧಿಕರು ಸ್ಥಳದಿಂದ ಓಡಿ ತಪ್ಪಿಸಿಕೊಂಡಿದ್ದಾರೆ. ಕೃತ್ಯ ಎಸಗಿದ ತಕ್ಷಣ ಗಣೇಶ್ ಮನೆಯ ಹತ್ತಿರದಲ್ಲಿದ್ದ ಕಾಡಿನ ಕಡೆಗೆ ಓಡಿ ಪರಾರಿಯಾಗಿದ್ದನು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬಳ್ಳಾರೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಕಾಡಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಸಂಜೆ ವೇಳೆಗೆ ಕಾಡಿನಲ್ಲಿ ಅಡಗಿದ್ದ ಗಣೇಶನನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಬಳ್ಳಾರೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments