ಮಂಗಳೂರು : ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ನೀಡಿರುವ ಮಾಹಿತಿಯ ಪ್ರಕಾರ, ಆರಿಫ್ ಕೊಲೆ ಪ್ರಕರಣದಲ್ಲಿ ಇದುವರೆಗೆ ಆರು ಮಂದಿ ಆರೋಪಿಗಳನ್ನು ಗುರುತಿಸಲಾಗಿದೆ. ಆದರೆ, ಆರೋಪಿಗಳು ಪತ್ತೆಯಾಗದಂತೆ ನಿರಂತರವಾಗಿ ತಮ್ಮ ಅಡಗುತಾಣಗಳನ್ನು ಬದಲಾಯಿಸುತ್ತಿರುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಂತಕರು ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ಈಗಾಗಲೇ ವಿಟ್ಲದ ಬುಡೋಲಿ ಎಂಬಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಗಾಂಭೀರ್ಯತೆಯನ್ನು ಅರಿತು, ಇದರ ಮುಂದಿನ ತನಿಖೆಯನ್ನು ಮಂಗಳೂರು ಸಿಸಿಬಿ (CCB) ಎಸಿಪಿ ತಂಡಕ್ಕೆ ವಹಿಸಲಾಗಿದೆ. ಈ ಕೃತ್ಯದಲ್ಲಿ ಇನ್ನು ಹೆಚ್ಚಿನ ವ್ಯಕ್ತಿಗಳು ಭಾಗಿಯಾಗಿರುವ ಶಂಕೆಯಿದ್ದು, ಹಂತಕರಿಗೆ ಹಣಕಾಸಿನ ನೆರವು ಅಥವಾ ಲಾಜಿಸ್ಟಿಕ್ ಬೆಂಬಲ ನೀಡಿದವರನ್ನು ಸಹ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಆರೋಪಿಗಳು ಬೆಂಗಳೂರು, ಕೇರಳ ಅಥವಾ ಮುಂಬೈಗೆ ಪರಾರಿಯಾಗಿರುವ ಸಾಧ್ಯತೆಯಿದ್ದು, ವಿಶೇಷ ತಂಡಗಳು ಅವರ ಬೆನ್ನಟ್ಟಿವೆ.
ಪೊಲೀಸ್ ಕಮಿಷನರ್ ಅವರು ಅಪರಾಧಿಗಳಿಗೆ ಆಶ್ರಯ ನೀಡುವವರ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದಾರೆ. ಯಾವುದೇ ರೀತಿಯಲ್ಲಿ ಹಂತಕರಿಗೆ ಸಹಾಯ ಮಾಡುವವರು ಭಾರತ್ ನ್ಯಾಯ ಸಂಹಿತೆ (BNS) ಸೆಕ್ಷನ್ 249(ಎ) ಅಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯ ಕೆಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಘಟನೆಯ ಹಿನ್ನೆಲೆ: ತಲಪಾಡಿ ಅಜ್ಜಿನಡ್ಕದ ಮುಳ್ಳುಗುಡ್ಡೆ ನಿವಾಸಿಯಾಗಿದ್ದ ಆರಿಫ್ ಹುಸೈನ್ (46) ಅವರನ್ನು ಕಳೆದ ಶುಕ್ರವಾರ ಮುಂಜಾನೆ 3:30ರ ಸುಮಾರಿಗೆ ತೊಕ್ಕೊಟ್ಟು ಫ್ಲೈಓವರ್ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಆರಿಫ್ ತನ್ನ ಬುಲೆಟ್ ಬೈಕ್ನಲ್ಲಿ ಮೀನುಗಾರಿಕಾ ಧಕ್ಕೆಯತ್ತ ತೆರಳುತ್ತಿದ್ದಾಗ, ಕಾರಿನಲ್ಲಿ ಬಂದ ಹಂತಕರು ಹಿಂಬದಿಯಿಂದ ಡಿಕ್ಕಿ ಹೊಡೆದು ಈ ಕೃತ್ಯ ಎಸಗಿದ್ದರು. ಇದು ಹಳೆಯ ಗ್ಯಾಂಗ್ ವಾರ್ ಅಥವಾ ದ್ವೇಷದ ಹಿನ್ನೆಲೆಯಲ್ಲಿ ನಡೆದ ‘ರಿವೇಂಜ್ ಕಿಲ್ಲಿಂಗ್’ ಎಂದು ಪೊಲೀಸರು ಶಂಕಿಸಿದ್ದಾರೆ.

