Home LOCAL Bantwal : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿದ ಕಾರು, ಉಡುಪಿಯ 7 ವಿದ್ಯಾರ್ಥಿಗಳು ಗಂಭೀರ!

Bantwal : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿದ ಕಾರು, ಉಡುಪಿಯ 7 ವಿದ್ಯಾರ್ಥಿಗಳು ಗಂಭೀರ!

0
62
Bantwal: Car overturns after hitting electric pole, 7 Udupi students in critical condition!

ಬಂಟ್ವಾಳ : ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ ಮಾರಿಪಳ್ಳದಲ್ಲಿ ಬುಧವಾರ ತಡರಾತ್ರಿ ಭೀಕರ ಕಾರು ಅಪಘಾತ ಸಂಭವಿಸಿದೆ. ಮಂಗಳೂರಿನಿಂದ ಬಿ.ಸಿ.ರೋಡ್ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಈ ಭೀಕರ ಘಟನೆಯಲ್ಲಿ ಕಾರಿನಲ್ಲಿದ್ದ ಉಡುಪಿ ಮೂಲದ ಏಳು ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬುಧವಾರ ರಾತ್ರಿ ಸುಮಾರು 12:45ರ ವೇಳೆಗೆ ಈ ಘಟನೆ ನಡೆದಿದ್ದು, ಕಾರಿನಲ್ಲಿ ನಾಲ್ವರು ವಿದ್ಯಾರ್ಥಿನಿಯರು ಮತ್ತು ಮೂವರು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮಾರಿಪಳ್ಳ ಸಮೀಪ ತಲುಪುತ್ತಿದ್ದಂತೆ ವೇಗವಾಗಿದ್ದ ಕಾರು ಏಕಾಏಕಿ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಕಾರು ರಸ್ತೆಯಲ್ಲೇ ಪಲ್ಟಿಯಾಗಿದ್ದು, ವಾಹನವು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಪಘಾತದ ಶಬ್ದ ಕೇಳಿ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಉರುಳಿ ಬಿದ್ದಿದ್ದ ಕಾರನ್ನು ಎತ್ತಿ ಅದರಲ್ಲಿದ್ದ ವಿದ್ಯಾರ್ಥಿಗಳನ್ನು ಹೊರತೆಗೆಯುವ ಮೂಲಕ ರಕ್ಷಣಾ ಕಾರ್ಯ ನಡೆಸಿದ್ದಾರೆ.

ಗಾಯಗೊಂಡ ಎಲ್ಲ ಏಳು ವಿದ್ಯಾರ್ಥಿಗಳನ್ನು ತಕ್ಷಣವೇ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರಿಗೂ ತೀವ್ರ ಸ್ವರೂಪದ ಪೆಟ್ಟು ಬಿದ್ದಿರುವುದರಿಂದ ಚಿಕಿತ್ಸೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ಅತೀ ವೇಗ ಅಥವಾ ಚಾಲಕನ ಅಜಾಗರೂಕತೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here

error: Content is protected !!