Home LOCAL Lakshmi Hebbalkar : ಜನರಿಗೆ ಹೇಳೋದಾಯ್ತು “ಮೋದಿ ಏನು ಮಾಡಿದ್ದಾರೆ ಮೊದಲು ಹೇಳಲಿ!” ಉಡುಪಿಯಲ್ಲಿ ಲಕ್ಷ್ಮಿ...

Lakshmi Hebbalkar : ಜನರಿಗೆ ಹೇಳೋದಾಯ್ತು “ಮೋದಿ ಏನು ಮಾಡಿದ್ದಾರೆ ಮೊದಲು ಹೇಳಲಿ!” ಉಡುಪಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ನೇರ ಸವಾಲು.

0
47

ಉಡುಪಿ : ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕೇಂದ್ರ ಸರ್ಕಾರ ಜನರಿಗೆ ಕೇವಲ ಸಲಹೆಗಳನ್ನು ನೀಡುತ್ತಾ ಕಾಲ ಕಳೆಯುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಅವರು ಗಂಟೆ ಬಾರಿಸಿ ಎಂದರೆ ಗಂಟೆ ಬಾರಿಸುತ್ತೇವೆ, ಚಪ್ಪಾಳೆ ತಟ್ಟಿ ಎಂದರೆ ತಟ್ಟುತ್ತೇವೆ. ಪೆಟ್ರೋಲ್-ಡೀಸೆಲ್ ಬಳಕೆ ಕಡಿಮೆ ಮಾಡಿ, ಬಂಗಾರ ಖರೀದಿ ನಿಲ್ಲಿಸಿ ಎಂದರೆ ದೇಶಕ್ಕಾಗಿ ಇತಿಮಿತಿಗಳನ್ನು ಪಾಲಿಸುತ್ತೇವೆ. ಆದರೆ, ದೇಶದಲ್ಲಿ ಇಂತಹ ಆರ್ಥಿಕ ಪರಿಸ್ಥಿತಿ ನಿರ್ಮಾಣವಾಗುವುದಕ್ಕೆ ಅಸಲಿ ಕಾರಣ ಯಾರು? ಕೇಂದ್ರ ಸರ್ಕಾರ ಜನರ ಮೇಲೆ ಜವಾಬ್ದಾರಿ ಹಾಕುವುದನ್ನು ಬಿಟ್ಟು, ತಾನು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳೇನು ಎಂಬುದನ್ನು ಮೊದಲು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಮುಂದುವರಿದು ಮಾತನಾಡಿದ ಅವರು, ಅಮೆರಿಕ ದೇಶವು ನಮ್ಮ ಪ್ರಧಾನ ಮಂತ್ರಿಯನ್ನು ಯಾವ ರೀತಿ ಕಂಟ್ರೋಲ್ ಮಾಡುತ್ತಿದೆ ಎಂಬುದನ್ನು ಮಾಧ್ಯಮಗಳಲ್ಲೇ ನೋಡುತ್ತಿದ್ದೇವೆ. ಭಾರತದ ಬಗ್ಗೆ ಟ್ರಂಪ್ ಏನು ಹೇಳುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದರು. ಕಚ್ಚಾ ತೈಲ ಬೆಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಏರಿಕೆಯಾಗದಿದ್ದರೂ, ಚುನಾವಣೆ ಮುಗಿದ ತಕ್ಷಣವೇ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ದಿಢೀರ್ 3 ರೂಪಾಯಿ ಹೆಚ್ಚಿಸಿರುವುದು ಕಂಪ್ಲೀಟ್ ರಾಜಕಾರಣ. ಹಿಂದೆ ಡಾ. ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರಿದ್ದರೂ ಜನರ ಮೇಲೆ ಇಷ್ಟು ದೊಡ್ಡ ಹೊರೆ ಹಾಕಿರಲಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ ಉಡುಪಿಯ ಹಿಜಾಬ್ ವಿವಾದದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಿಕ್ಷಣದಲ್ಲಿ ರಾಜಕಾರಣವನ್ನು ಯಾವತ್ತೂ ಮಾಡಬಾರದು. ಮುಗ್ಧ ಮಕ್ಕಳ ಭವಿಷ್ಯದ ಜೊತೆ ಯಾರೂ ಚೆಲ್ಲಾಟ ಆಡಬಾರದು. ಶಾಲಾ ಆವರಣದಲ್ಲಿ ಒಳ್ಳೆಯ ವಾತಾವರಣ ನಿರ್ಮಿಸುವುದು ನಮ್ಮ ಕರ್ತವ್ಯವಾಗಿದ್ದು, ಮಕ್ಕಳ ಭವಿಷ್ಯವನ್ನು ತಲೆಯಲ್ಲಿಟ್ಟುಕೊಂಡು ರಾಜಕೀಯ ಮಾಡಬೇಕೆಂದು ಕಿವಿಮಾತು ಹೇಳಿದರು. ಇನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, ನಾವೆಲ್ಲರೂ ಪಕ್ಷದ ಶಿಸ್ತಿನ ಸಿಪಾಯಿಗಳು, ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಬಾಗಲಕೋಟೆಯಲ್ಲಿ ಅಂಗನವಾಡಿಯಿಂದ ಹಣ ಕಲೆಕ್ಷನ್ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಕ್ಕೆ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, ಇಲಾಖೆಯಿಂದ ಯಾವುದೇ ಅಂಗನವಾಡಿಯಿಂದಲೂ ನಯಾಪೈಸೆ ಹಣ ಪಡೆದಿಲ್ಲ. ಯಾರೇ ಆಗಲಿ ಈ ರೀತಿ ಅಕ್ರಮ ಹಣ ವಸೂಲಿ ಮಾಡಿದ್ದರೆ ಅವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಮತ್ತು ಈ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಇದನ್ನು ಓದಿ : Anekal Human Skeleton Found : ಆನೇಕಲ್ ಮುಗಳೂರು ಕೆರೆಯಲ್ಲಿ ಭಯಾನಕ ಮಾನವ ಅಸ್ಥಿಪಂಜರ ಪತ್ತೆ!

LEAVE A REPLY

Please enter your comment!
Please enter your name here

error: Content is protected !!