Home LOCAL Udupi Fake Harmony Drama : ಮಹಿಳೆಯರು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು...

Udupi Fake Harmony Drama : ಮಹಿಳೆಯರು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

0
32

ಉಡುಪಿ : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಿವಾಸಕ್ಕೆ ಇಬ್ಬರು ಹಿಜಾಬ್ ಧರಿಸಿದ ಮಹಿಳೆಯರು ವೃದ್ಧ ಹಿಂದೂ ಮಹಿಳೆಯೊಬ್ಬರನ್ನು ಕರೆತಂದು, ಆಕೆ ತಮ್ಮ ನೆರೆಹೊರೆಯವರು ಎಂದು ಪರಿಚಯಿಸಿ ನಿವೇಶನ ಕೊಡಿಸುವಂತೆ ಮನವಿ ಮಾಡಿದ್ದರು. ಈ ಘಟನೆಯನ್ನು ಮುಂದಿಟ್ಟುಕೊಂಡು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳ ಮುಂದೆ ಬಿಜೆಪಿ ವಿರುದ್ಧ ಸೌಹಾರ್ದತೆಯ ಭಾಷಣ ಬಿಗಿದಿದ್ದರು. ಆದರೆ, ಈಗ ಈ ಘಟನೆ ಸಂಪೂರ್ಣ ನಕಲಿ ಎಂದು ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ಗಂಭೀರ ಆರೋಪ ಮಾಡಿದ್ದಾರೆ. ಆ ವೃದ್ಧೆ ಗಿರಿಜಾ ಶೆಟ್ಟಿಗಾರ್ ಬೇರೆ ಯಾರೂ ಅಲ್ಲ, ಆ ಇಬ್ಬರು ಮುಸ್ಲಿಂ ಮಹಿಳೆಯರ ಹೆತ್ತ ತಾಯಿ! ಆ ಇಬ್ಬರು ಹೆಣ್ಣುಮಕ್ಕಳು ಮದುವೆಯಾದ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು, ಪ್ರಚಾರಕ್ಕಾಗಿ ಸ್ವಂತ ತಾಯಿಯನ್ನೇ ನೆರೆಹೊರೆಯವಳು ಎಂದು ಸಚಿವರಿಗೆ ಸುಳ್ಳು ಹೇಳಿ ಇಡೀ ಉಡುಪಿಗೆ ಅವಮಾನ ಮಾಡಿದ್ದಾರೆ ಎಂದು ನೀತಾ ಪ್ರಭು ಆಕ್ರೋಶ ಹೊರಹಾಕಿದ್ದಾರೆ. “ಬೆಳಗಾವಿಯಿಂದ ಬರುವ ಉಸ್ತುವಾರಿ ಸಚಿವರಿಂದ ಉಡುಪಿಯ ಜನ ಸೌಹಾರ್ದತೆ ಕಲಿಯಬೇಕಿಲ್ಲ” ಎಂದು ಅವರು ಟಾಂಗ್ ಕೊಟ್ಟಿದ್ದಾರೆ.

ಇದೇ ವಿಷಯವಾಗಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಕೂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಚಿವರು ಬಹಿರಂಗ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಬುರ್ಖಾ ಧರಿಸಿದ ಮಹಿಳೆಯರು ಸುಳ್ಳು ಮಾಹಿತಿ ನೀಡಿ ಸಚಿವರನ್ನು ದಾರಿ ತಪ್ಪಿಸಿದ್ದಾರೆ. ಪ್ರಚಾರಕ್ಕಾಗಿ ಹೆತ್ತ ತಾಯಿಯನ್ನೇ ನೆರೆಮನೆಯವಳು ಎಂದು ಸಚಿವರಿಗೆ ಪರಿಚಯಿಸಿರುವುದು “ಕ್ಷಮಿಸಲಾರದ ಅಪರಾಧ ಮತ್ತು ವಂಚನೆ” ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತ್ಯಾಸತ್ಯತೆ ಪರಿಶೀಲಿಸದೆ ಬಿಜೆಪಿ ವಿರುದ್ಧ ಕೋಮು ಸೌಹಾರ್ದತೆಯ ಪಾಠ ಮಾಡಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇಷ್ಟೊಂದು ಆತುರ ಏಕಿತ್ತು? ಜಿಲ್ಲೆಯ ಬಿಜೆಪಿ ಶಾಸಕರು ಅಥವಾ ಸಂಸದರು ಕಚೇರಿಗೆ ಬರುವವರ ಜಾತಿ, ಧರ್ಮ ನೋಡಿ ಎಂದೂ ತಾರತಮ್ಯ ಮಾಡಿಲ್ಲ. ಆದರೆ ದೇಶಭಕ್ತಿ ಮತ್ತು ಹಿಂದುತ್ವ ವಿರೋಧಿ ಶಕ್ತಿಗಳ ವಿರುದ್ಧ ಬಿಜೆಪಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸುವರ್ಣ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಶಾಸಕ ಯಶ್‌ಪಾಲ್ ಸುವರ್ಣ ಅವರು ಅತ್ಯಂತ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, “ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಿಗೆ ಬುರ್ಖಾ ಅಥವಾ ಹಿಜಾಬ್ ಧರಿಸಿ ಬರುವವರ ಮೇಲೆ ವಿಶೇಷ ನಿಗಾ ಇಡುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು” ಎಂದು ಎಚ್ಚರಿಸಿದ್ದಾರೆ. ಸಚಿವರು ಸತ್ಯ ತಿಳಿಯದೆ ಮಾಧ್ಯಮಗಳ ಮುಂದೆ ಬಿಜೆಪಿಯನ್ನು ಕೋಮು ಶಕ್ತಿ ಎಂದು ಬಿಂಬಿಸಲು ಹೋಗಿ ತಾವೇ ಮುಜುಗರಕ್ಕೆ ಈಡಾಗಿದ್ದಾರೆ. ಈ ಇಡೀ ಪ್ರಹಸನದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಸಚಿವರು ತಕ್ಷಣವೇ ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅವರು ಜಿಲ್ಲೆಗೆ ಭೇಟಿ ನೀಡುವಾಗ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಸುವರ್ಣ ಎಚ್ಚರಿಕೆ ನೀಡಿದ್ದಾರೆ. ಈ ಘಟನೆ ಕರಾವಳಿ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.

ಇದನ್ನು ಓದಿ : Belthangady : ಅಕ್ರಮ ಜೂಜಾಟದ ಅಡ್ಡೆ ಮೇಲೆ ವೇಣೂರು ಪೊಲೀಸರ ದಾಳಿ; 17 ಮಂದಿ ಅರೆಸ್ಟ್! ನಗದು, ಆಟೋ ಜಪ್ತಿ!

LEAVE A REPLY

Please enter your comment!
Please enter your name here

error: Content is protected !!