Home ತಾಜಾ ಸುದ್ದಿ Belthangady : ಪಜಿರಡ್ಕದ ನೇತ್ರಾವತಿ ನದಿಯಲ್ಲಿ ಮುಳುಗಿ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು!

    Belthangady : ಪಜಿರಡ್ಕದ ನೇತ್ರಾವತಿ ನದಿಯಲ್ಲಿ ಮುಳುಗಿ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು!

    0
    34
    Belthangady : Engineering student drowned in Pajiradka's Netravati river!

    ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಕಲ್ಯಂಜ ಗ್ರಾಮದ ಪಜಿರಡ್ಕದ ನೇತ್ರಾವತಿ ನದಿಯಲ್ಲಿ ಮೇ 19ರಂದು ಮಂಗಳವಾರ ಸಂಜೆ ಸುಮಾರು 4 ಗಂಟೆಗೆ ಈ ಘೋರ ದುರಂತ ಸಂಭವಿಸಿದೆ. ಏಳು ಮಂದಿ ವಿದ್ಯಾರ್ಥಿಗಳ ತಂಡ ನದಿಗೆ ಈಜಲು ತೆರಳಿತ್ತು. ಈ ವೇಳೆ ನೀರಿನ ಆಳ ತಿಳಿಯದೆ ನದಿಗೆ ಇಳಿದ ಉಜಿರೆಯ ಖಾಸಗಿ ಕಾಲೇಜಿನ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಶ್ರೀಪೂರ್ಣ (21) ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾನೆ. ಮೃತ ದುರ್ದೈವಿ ಶ್ರೀಪೂರ್ಣ ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ನಿವಾಸಿಯಾಗಿದ್ದು, ಇಂಜಿನಿಯರಿಂಗ್ ಮುಗಿಸಿ ಉಜ್ವಲ ಭವಿಷ್ಯ ಕಾಣಬೇಕಿದ್ದ ಯುವಕ ಹೀಗೆ ಶವವಾಗಿ ಮಲಗಿರುವುದು ಹೆತ್ತವರ ಒಡಲು ಸೀಳುವಂತೆ ಮಾಡಿದೆ.

    ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ನದಿಯಲ್ಲಿ ಯುವಕನ ಮೃತದೇಹ ಪತ್ತೆಗಾಗಿ ಸ್ಥಳೀಯರು ತಕ್ಷಣವೇ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ‘ಶೌರ್ಯ’ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿತು. ಕತ್ತಲನ್ನೂ ಲೆಕ್ಕಿಸದೆ ರಾತ್ರಿ ಇಡೀ ನಡೆಸಿದ ಹರಸಾಹಸದ ಕಾರ್ಯಾಚರಣೆಯ ಫಲವಾಗಿ, ರಾತ್ರಿ 9.30ರ ಸುಮಾರಿಗೆ ನೇತ್ರಾವತಿ ನದಿಯ ಪಾತ್ರದಲ್ಲಿ ಶ್ರೀಪೂರ್ಣನ ಮೃತದೇಹ ಪತ್ತೆಯಾಗಿದೆ. ಮಗನ ಶವ ನೋಡಿ ಸ್ನೇಹಿತರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

    ವಿಷಯ ತಿಳಿದು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್. ಗಾಣಿಗೇರ ಮತ್ತು ಅವರ ಪೊಲೀಸ್ ತಂಡ ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬೇಸಿಗೆಯ ಸಮಯದಲ್ಲಿ ನದಿಯ ಅಪಾಯಕಾರಿ ಸುಳಿಗಳ ಬಗ್ಗೆ ಅರಿವಿಲ್ಲದೆ ಹೊರಜಿಲ್ಲೆಯ ವಿದ್ಯಾರ್ಥಿಗಳು ನೀರಿಗೆ ಇಳಿಯುತ್ತಿರುವುದು ಇಂತಹ ಸರಣಿ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಭೀಕರ ದುರಂತಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ.

    LEAVE A REPLY

    Please enter your comment!
    Please enter your name here

    error: Content is protected !!