ಕೋಲಾರ : ಕೋಲಾರದಲ್ಲಿ ಸೋಮವಾರ ರಾತ್ರಿ ಬಿದ್ದ ಮಳೆಯಿಂದ ತುಂಡಾಗಿ ಕೆಳಗೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ 7 ವರ್ಷದ ಬಾಲಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಹೃದಯವಿದ್ರಾವಕ ಘಟನೆ ಕೋಲಾರ ನಗರದ ಪುಲ್ ಷಾ ಮೊಹಲ್ಲಾದಲ್ಲಿ ಸಂಭವಿಸಿದೆ. ಪುಲ್ ಷಾ ಮೊಹಲ್ಲಾದ ನಿವಾಸಿ ಇಮ್ತಿಯಾಝ್ ಎಂಬವರ ಪುತ್ರ ಸೈಯದ್ ರೆಹಮಾನ್ ಮೃತಪಟ್ಟ ದುರ್ದೈವಿ ಬಾಲಕನಾಗಿದ್ದಾನೆ. ಸೋಮವಾರ ರಾತ್ರಿ ನಗರದಲ್ಲಿ ಬಿದ್ದ ಮಳೆಯ ಭೀಕರತೆಗೆ ವಿದ್ಯುತ್ ತಂತಿ ತುಂಡಾಗಿ ಕೆಳಗೆ ಬಿದ್ದಿತ್ತು. ಆದರೆ, ರಸ್ತೆಯಲ್ಲಿ ಬಿದ್ದಿದ್ದ ಈ ಲೈವ್ ವೈರ್ ಗಮನಿಸದ ಬಾಲಕನಿಗೆ ತಂತಿ ತಗುಲಿದ ಪರಿಣಾಮ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾನೆ.
ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಮೊಹಲ್ಲಾವೇ ಕಣ್ಣೀರಲ್ಲಿ ಮುಳುಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕೋಲಾರ ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆಗಾಲದ ಆರಂಭದ ಸಮಯದಲ್ಲಿ ಇಂಧನ ಇಲಾಖೆಯ ಇಂತಹ ನಿರ್ಲಕ್ಷ್ಯಗಳು ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಗಿವೆ.
ಸದ್ಯ ಈ ಘೋರ ದುರಂತಕ್ಕೆ ಸಂಬಂಧಿಸಿದಂತೆ ಕೋಲಾರ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ. ಮಳೆಗಾಲದಲ್ಲಿ ಇಂತಹ ತುಂಡಾದ ತಂತಿಗಳ ಬಗ್ಗೆ ಸಾರ್ವಜನಿಕರು ಹಾಗೂ ಪೋಷಕರು ತೀವ್ರ ಮುನ್ನೆಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನು ಓದಿ : Dakshina Kannada – Udupi : ಇಂಟರ್ನೆಟ್ ಮೆಡಿಸಿನ್ ದಂಧೆಗೆ ಬ್ರೇಕ್ ಹಾಕಲು ಇಂದು ಕೆಲವು ಮೆಡಿಕಲ್ ಶಾಪ್ ಬಂದ್ ಭೀತಿ!



