ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಲಾವಣ್ಯಾ ಕೊಲೆ ಪ್ರಕರಣದ ಭೀತಿ ಮಾಸುವ ಮುನ್ನವೇ ಮಂಗಳೂರಿನಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ತನ್ನ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿ ನರ್ಸ್ ಒಬ್ಬರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ ಬೆನ್ನಲ್ಲೇ, ಆರೋಪಿ ನೌಶದ್ ವಾಟ್ಸಾಪ್ ವಾಯ್ಸ್ ಮೆಸೇಜ್ ಮೂಲಕ “ಪೊಲೀಸರಿಗೆ ಶರಣಾಗುವ ಮುನ್ನವೇ ನಿನ್ನ ತಲೆ ತೆಗೀತೀನಿ” ಎಂದು ನೇರವಾಗಿ ಜೀವ ಬೆದರಿಕೆ ಹಾಕಿದ್ದಾನೆ.
ಪುತ್ತೂರು ಮೂಲದ, ಮಂಗಳೂರಿನ ನೀರುಮಾರ್ಗದಲ್ಲಿ ವಾಸವಿದ್ದ ನರ್ಸ್ ನಂದಿನಿ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಆಗಸ್ಟ್ 16ರಂದು ನಂದಿನಿ ಮೈಸೂರಿಗೆ ತೆರಳಿದ್ದ ವೇಳೆ ಮನೆಯ ನಾಯಿಗೆ ಊಟ ಹಾಕಲು ಕೀಯನ್ನು ಸ್ನೇಹಿತೆ ಚಂದನಾಗೆ ನೀಡಿದ್ದರು. ಮರುದಿನ ಚಂದನಾ ಜೊತೆ ಮತ್ತೊಬ್ಬ ನರ್ಸ್ ಆದಿತ್ಯಾ ಮನೆಗೆ ಬಂದಿದ್ದಾಗ, ಆರೋಪಿ ನೌಶದ್ ಅಕ್ರಮವಾಗಿ ಮನೆಗೆ ನುಗ್ಗಿ ಇಬ್ಬರ ಮೇಲೂ ದೌರ್ಜನ್ಯ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದನ್ನು ಪ್ರಶ್ನಿಸಿದ ನಂದಿನಿಗೂ ಫೋನ್‌ನಲ್ಲಿ ಕೊಲೆ ಬೆದರಿಕೆ ಹಾಕಿದ್ದ.
ಘಟನೆ ಸಂಬಂಧ ನಂದಿನಿ ಮಹಿಳಾ ಠಾಣೆ ಹಾಗೂ ಗ್ರಾಮಾಂತರ ಠಾಣೆಗೆ ದೂರು ನೀಡುತ್ತಿದ್ದಂತೆ, ಆಕ್ರೋಶಗೊಂಡ ನೌಶದ್ ವಾಟ್ಸಾಪ್‌ನಲ್ಲಿ ವಾಯ್ಸ್ ನೋಟ್ ಕಳುಹಿಸಿ ಭೀಕರ ಬೆದರಿಕೆ ಒಡ್ಡಿದ್ದಾನೆ. ಇತ್ತ ಮತ್ತೊಬ್ಬ ನರ್ಸ್ ಆದಿತ್ಯಾ ಅವರ ಖಾಸಗಿ ಫೋಟೋ-ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದ್ದು, ಆಕೆ ಕೇರಳಕ್ಕೆ ತೆರಳಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಮತ್ತೊಂದೆಡೆ, ದೂರು ನೀಡಿದ ಬೆನ್ನಲ್ಲೇ ಆಸ್ಪತ್ರೆ ಆಡಳಿತ ಮಂಡಳಿ ಇಬ್ಬರೂ ನರ್ಸ್‌ಗಳನ್ನು ಕೆಲಸದಿಂದ ವಜಾಗೊಳಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ದೂರು ದಾಖಲಾದರೂ ಪೊಲೀಸರು ತಕ್ಷಣ ಕ್ರಮ ಕೈಗೊಂಡಿಲ್ಲ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, “ದೂರವಾಣಿ ಬೆದರಿಕೆಗೆ ಕಾನೂನಿನಲ್ಲಿ ನಿಗದಿಯಾದ ಶಿಕ್ಷೆಯ ಮಿತಿ ಕಡಿಮೆಯಿರುವುದರಿಂದ ತಕ್ಷಣ ಬಂಧಿಸಲು ಅವಕಾಶವಿರಲಿಲ್ಲ” ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಆದರೆ, ಪೊಲೀಸರು ಬಂಧಿಸುವ ಮುನ್ನವೇ ಆರೋಪಿ ನೌಶದ್ ಕೋರ್ಟ್‌ಗೆ ಹಾಜರಾಗಿ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಸಂತ್ರಸ್ತ ಯುವತಿಗೆ ಜೀವಭಯ ಎದುರಾಗಿದ್ದು ಸೂಕ್ತ ಪೊಲೀಸ್ ರಕ್ಷಣೆಗೆ ಆಗ್ರಹ ಕೇಳಿಬಂದಿದೆ.
ಇದನ್ನು ಓದಿ : Bengaluru : ಪೊಲೀಸರ ಮೇಲೆ ಅಟ್ಯಾಕ್ ಮಾಡಿ ಓಡುತ್ತಿದ್ದ ಕೊಲೆ ಕೇಸ್ ಆರೋಪಿಗೆ ಗುಂಡೇಟು!