ನವದೆಹಲಿ : ನವದೆಹಲಿಯಲ್ಲಿ ಬೆಚ್ಚಿಬೀಳಿಸುವ ಅಪರಾಧ ಘಟನೆಯೊಂದು ನಡೆದಿದ್ದು, 21 ವರ್ಷದ ಯುವ ಮಾಡೆಲ್ ಮುಸ್ಕಾನ್ ಎಂಬಾಕೆಯನ್ನು ಆಕೆಯ ಮನೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಜಿಮ್ ಟ್ರೈನರ್ ಇಮ್ರಾನ್ನನ್ನು ದೆಹಲಿ ಪೊಲೀಸರು ಎನ್ಕೌಂಟರ್ ಮೂಲಕ ಹೆಡೆಮುರಿ ಕಟ್ಟಿದ್ದಾರೆ. ಪಶ್ಚಿಮ ದೆಹಲಿಯ ರಾಜೋರಿ ಗಾರ್ಡನ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಆರೋಪಿ ಇಮ್ರಾನ್ನ ಎರಡೂ ಕಾಲುಗಳಿಗೆ ಗುಂಡೇಟು ಬಿದ್ದಿದ್ದು, ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸ್ ಭದ್ರತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಲೆಗೆ ಕಾರಣವೇನು? ಪೊಲೀಸರ ತನಿಖೆಯ ಪ್ರಕಾರ, ಮುಸ್ಕಾನ್ ಹಾಗೂ ಜಿಮ್ ಟ್ರೈನರ್ ಇಮ್ರಾನ್ ಕಳೆದ ಒಂದೂವರೆ ವರ್ಷದಿಂದ ಪರಿಚಿತರಾಗಿದ್ದರು. ಆದರೆ ಇತ್ತೀಚೆಗೆ ಮುಸ್ಕಾನ್ ಬೇರೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಇಮ್ರಾನ್ ತೀವ್ರ ಅಸಮಾಧಾನ ಹಾಗೂ ಕೋಪಗೊಂಡಿದ್ದ. ಇದೇ ಸಿಟ್ಟಿನಲ್ಲಿ ಬುಧವಾರ ಸಂಜೆ ಸುಮಾರು 5:40 ರ ವೇಳೆಗೆ, ಮುಸ್ಕಾನ್ ತಿಲಕ್ ನಗರದಲ್ಲಿರುವ ತನ್ನ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭವನ್ನು ನೋಡಿಕೊಂಡು ನುಗ್ಗಿದ್ದಾನೆ. ಅಲ್ಲಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಆಕ್ರೋಶಗೊಂಡ ಇಮ್ರಾನ್ ತನ್ನ ಬಳಿಯಿದ್ದ ಚಾಕುವಿನಿಂದ ಆಕೆಯ ಮೇಲೆ ಮನಬಂದಂತೆ ಇರಿದು ಸ್ಥಳದಿಂದ ಪರಾರಿಯಾಗಿದ್ದ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ? ಬುಧವಾರ ಮನೆಯ ಕೆಲಸದಾಕೆ ಎಂದಿನಂತೆ ಬಂದಾಗ, ಮನೆಯ ಎರಡನೇ ಮಹಡಿಯಲ್ಲಿ ಮುಸ್ಕಾನ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಆಕೆ ಮನೆಯವರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ಯುವತಿಯನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಪರೀಕ್ಷಿಸಿದ ವೈದ್ಯರು ಆಕೆ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮೃತ ಮುಸ್ಕಾನ್ ದೆಹಲಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓಪನ್ ಲರ್ನಿಂಗ್ನಲ್ಲಿ (SOL) ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದು, ಪಶ್ಚಿಮ ದೆಹಲಿಯ ತಿಲಕ್ ನಗರದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು.
ಘಟನೆ ನಡೆದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಹಂತಕನ ಪತ್ತೆಗಾಗಿ ದೆಹಲಿ ಪೊಲೀಸರು ಹಲವು ವಿಶೇಷ ತಂಡಗಳನ್ನು ರಚಿಸಿದ್ದರು. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಯ ಚಲನವಲನವನ್ನು ಪತ್ತೆಹಚ್ಚಿ ರಾಜೋರಿ ಗಾರ್ಡನ್ ಬಳಿ ಸುತ್ತುವರೆದಿದ್ದಾರೆ. ಈ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಇಮ್ರಾನ್ ಮೇಲೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದು, ಆತನ ಎರಡೂ ಕಾಲುಗಳಿಗೆ ಗುಂಡೇಟು ಬಿದ್ದಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ : Puttur : ಹುಣಸೂರಿನಲ್ಲಿ ಭೀಕರ ರಸ್ತೆ ಅಪಘಾತ ; ಪುತ್ತೂರು ಮೂಲದ ಯುವಕ ಸಂಶುದ್ದೀನ್ ದಾರುಣ ಸಾವು!